Monday, October 20, 2025
Flats for sale
Homeಜಿಲ್ಲೆಮಂಗಳೂರು : RSS ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ,ಬುದ್ದ ತತ್ವ,ಬಸವ ತತ್ವ ಒಪ್ಪುವುದಿಲ್ಲ, ಪ್ರಿಯಾಂಕ್...

ಮಂಗಳೂರು : RSS ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ,ಬುದ್ದ ತತ್ವ,ಬಸವ ತತ್ವ ಒಪ್ಪುವುದಿಲ್ಲ, ಪ್ರಿಯಾಂಕ್ ಖರ್ಗೆ ಮಾತಲ್ಲಿ ಸತ್ಯತೆಯಿದೆ : ಎಂ.ಎಲ್.ಸಿ ಮಂಜುನಾಥ್ ಭಂಡಾರಿ….!

ಮಂಗಳೂರು : “ಬಿಜೆಪಿಯವರಿಗೆ ಒಂದು ಪಾಕಿಸ್ತಾನ ಇನ್ನೊಂದು ಮುಸ್ಲಿಂ ಇವೆರಡು ಬಿಟ್ರೆ ಏನೂ ಗೊತ್ತಿಲ್ಲ. ಬಿಜೆಪಿ 10 ವರ್ಷಗಳಲ್ಲಿ ನಡೆಸಿರುವ ಆಡಳಿತದಲ್ಲಿ ಯಾವುದನ್ನು ಹಿಡ್ಕೊಂಡು ಮತ ಕೇಳಿದ್ರಿ? ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಬಗ್ಗೆ ಮಾತಾಡಿದ್ರೆ ದೇಶದ್ರೋಹಿ ಪಟ್ಟ ಕಟ್ಟುತ್ತೀರಿ. ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ರಲ್ಲಿ ಏನು ತಪ್ಪಿದೆ? ಆರೆಸ್ಸೆಸ್ ಹಿಂದುಳಿದ ವರ್ಗದ ಮಕ್ಕಳನ್ನು ಲಾಠಿ, ಗನ್ನು ಕೊಟ್ಟು ಕೊಡ್ತಾ ಇರೋ ತರಬೇತಿ ಏನು? ಸರಕಾರ ಹೇಳಿದ್ದು ಆರೆಸ್ಸೆಸ್ ಸಹಿತ ಖಾಸಗಿ ಸಂಘಟನೆಗಳಿಗೆ ಸರಕಾರಿ ಮೈದಾನ, ರಸ್ತೆ, ಶಾಲೆಗಳಲ್ಲಿ ಕಾರ್ಯ ಚಟುವಟಿಕೆ ನಡೆಸಲು ಅನುಮತಿ ಬೇಕು ಎಂದು ಅಷ್ಟೇ. ನಿಮಗೆ ಅನುಮತಿ ಪಡೆಯಲು ಏನು ಸಮಸ್ಯೆಯಿದೆ? ಆರೆಸ್ಸೆಸ್ ಸಂಘಟನೆಗೆ 100 ವರ್ಷಗಳು ಆಯ್ತು ಅಂತ ದೇಶಾದ್ಯಂತ ಪಥ ಸಂಚಲನ ನಡೆಸ್ತೀರಿ, ಇಷ್ಟು ವರ್ಷಗಳಲ್ಲಿ ಯಾಕೆ ಸಂಘಟನೆಯನ್ನು ನೋಂದಣಿ ಮಾಡಿಸಿಕೊಂಡಿಲ್ಲ? ನೋಂದಣಿ ಮಾಡಿಸಿಕೊಳ್ಳದ ಸಂಘಟನೆಗೆ ಎಲ್ಲಿಂದ ಹಣ ಬರುತ್ತದೆ? ಖಾತೆಯಲ್ಲಿ ಎಷ್ಟು ಹಣ ಇದೆ? ಇದರ ತರಬೇತಿ ಯಾವ ರೀತಿ ನಡೆಯುತ್ತೆ? ಅಂತ ಸಂವಿಧಾನದಲ್ಲಿ ಯಾಕೆ ಕೇಳಬಾರದು?“ ಎಂದು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಿದರು.

”ಆರೆಸ್ಸೆಸ್ ಒಂದು ಸಂಘಟನೆಯೇ ಅಲ್ಲ ಅದೊಂದು ಸಂಘಟನೆ ಆಗಿದ್ದರೆ ಅದಕ್ಕೆ ಕೆಲವೊಂದು ಮಾನದಂಡಗಳಿವೆ. ಮುಖ್ಯವಾಗಿ ನೋಂದಣಿ ಮಾಡಿರಬೇಕು. ಅದ್ಯಾವುದೂ ಇಲ್ಲದ ಆರೆಸ್ಸೆಸ್ ಮತ್ತು ಇತರ ಖಾಸಗಿ ಸಂಘಟನೆಗಳಿಗೆ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಸರಕಾರ ನಿಷೇಧ ಹೇರಿದೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಈ ನಿರ್ಧಾರ ಸರಿಯಾಗಿಯೇ ಇದೆ. ಅದನ್ನು ನಾನು ಸಹಿತ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುತ್ತೇವೆ“ ಎಂದರು.

”ವಿದ್ಯಾರ್ಥಿ ಜೀವನದಿಂದಲೇ ನಾನು ಆರೆಸ್ಸೆಸ್ ಬಿಜೆಪಿ ವಿರುದ್ಧ ಹೋರಾಟ ಮಾಡಿದವನು. ಯಡಿಯೂರಪ್ಪ ವಿರುದ್ಧ ಮಾತಾಡಿ ಎದುರು ಹಾಕಿಕೊಂಡವನು ನಾನು. ನಾವು ಕರಾವಳಿ ಕಾಂಗ್ರೆಸಿಗರು ಪ್ರತಿಯೊಬ್ಬರೂ ಖರ್ಗೆ ಅವರ ಜೊತೆಗಿದ್ದೇವೆ. ಇಲ್ಲಿ ಆರೆಸ್ಸೆಸ್ ಬ್ಯಾನ್ ಆಗಿದೆ ಎಂದು ಬೊಬ್ಬೆ ಹೊಡೆಯುವವರು ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಲ್ಲಿ ಆರೆಸ್ಸೆಸ್ ಮಾತ್ರವಲ್ಲ ಯಾವುದೇ ಖಾಸಗಿ ಸಂಘಟನೆಗಳಿಗೆ ಸರಕಾರಿ ಜಾಗ ಬಳಸುವುದಕ್ಕೆ ಅನುಮತಿ ಪಡೆಯಲೇಬೇಕಾಗಿದೆ. ಮಡಿಕೇರಿಯಲ್ಲಿ ಮಕ್ಕಳಿಗೆ ಗನ್ ತರಬೇತಿ ಕೊಟ್ಟಿದ್ದು ನಾವೆಲ್ಲರೂ ನೋಡಿದ್ದೇವೆ. ಬಿಜೆಪಿ ಆರೆಸ್ಸೆಸ್ ನಾಯಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಶಿಕ್ಷಣಕ್ಕೆ ಉದ್ಯೋಗಕ್ಕೆ ಕಳುಹಿಸಿ ಇಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಸ್ತ್ರ ಕೊಟ್ಟು ಪ್ರಚೋದನೆ ಮಾಡುವುದು ಎಲ್ಲಿಯ ನ್ಯಾಯ?“ ಎಂದರು.

“ದಿನೇಶ್ ಅಮೀನ್ ಮಟ್ಟು ಆರೋಪ ಮಾಡಿರುವಂತೆ ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್ ನ ಯಾವುದೇ ರೀತಿಯ ಕಾರ್ಯಕ್ರಮ ಇಲ್ಲಿನವರೆಗೆ ನಡೆದಿಲ್ಲ. ಸೃಷ್ಟಿ ಅಂತ ಒಂದು ಪ್ರಾಜೆಕ್ಟ್ ಕಾರ್ಯಕ್ರಮ ನಡೆದಿತ್ತು ಅದು ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳ ಒಟ್ಟು ಸೇರುವಿಕೆಯಲ್ಲಿ ನಡೆದಿದ್ದ ವಿಜ್ಞಾನ ಮಾಡೆಲ್ ಕಾರ್ಯಕ್ರಮ. ಅದರಲ್ಲಿ ಎಬಿವಿಪಿ ಕೂಡಾ ಪಾಲು ಪಡೆದಿತ್ತು. ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅದರಲ್ಲಿ ಪಾಲ್ಗೊಂಡ ಕಾರಣ ನಾನು ಭಾಗವಹಿಸಿದ್ದೆ. ಎಬಿವಿಪಿ ಸಮ್ಮೇಳನ, ಬೈಠಕ್ ನಡೆದಿದೆ ಎನ್ನುವವರು ಅದಕ್ಕೆ ಆಧಾರ ತೋರಿಸಲಿ. ಹೀಗೆ ಹೇಳುವವರು ಯಾವ ನೈತಿಕ ಆಧಾರದಲ್ಲಿ ಕಾಂಗ್ರೆಸ್ ಟಿಕೆಟ್ ಕೇಳಿದ್ರು? ಇಂದಿರಾಗಾಂಧಿ ಬಗ್ಗೆ ಬರೆದ್ರು, ರಾಜೀವ್ ಗಾಂಧಿ ಬಗ್ಗೆ ಬರೆದ್ರು ಆದ್ರೂ ಸಿದ್ಧಾಂತ ಗೊತ್ತಿಲ್ಲದೇ ಎಂಎಲ್ ಸಿ ಟಿಕೆಟ್ ಕೊಡಿ ಅಂತ ಕೇಳಿದ್ರು? ಮುಂದೆ ಇಂತಹ ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ“ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಹಿಳಾ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ವಿಕಾಸ್ ಶೆಟ್ಟಿ, ನೀರಜ್ ಪಾಲ್, ಆರ್. ಪದ್ಮರಾಜ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular