ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಮಹಾನಗರಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮ 2011 ರಂತೆ ಪ್ರತೀ 5 ವರ್ಷಗಳ ಅವಧಿಯಲ್ಲಿ ಖಾಲಿ ಹುದ್ದೆಗಳ ಲಭ್ಯತೆಗೆ ಅನುಗುಣವಾಗಿ ಮುಂಭಡ್ತಿ ನೀಡಲು ಅವಕಾಶ ಕಲ್ಪಿಸಲಾಗಿದ್ದರೂ ಸಹ ಸುಮಾರು 30 – 35 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ ಹೊರತಾಗಿಯೂ ತಮ್ಮ ಸೇವಾವಧಿಯಲ್ಲಿ ಯಾವುದೇ ರೀತಿಯ ಮುಂಭಡ್ತಿ ಪಡೆಯದೆ ವಯೋನಿವೃತ್ತಿ ಹೊಂದಿರುತ್ತಾರೆ.ಈ ನಿಟ್ಟಿನಲ್ಲಿ ಸಾಕಷ್ಟು ವರ್ಷಗಳಿಂದ ಮುಂಭಡ್ತಿ ಪಡೆಯದೆ ವಂಚಿತರಾಗುತ್ತಿದ್ದ ಹಿನ್ನಲೆಯಲ್ಲಿ ಮಹಾನಗರಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮ 2011 ರಂತೆ ಮುಂಭಡ್ತಿ ವೃಂದವಾದ ಸ್ಯಾನಿಟರಿ ಸುಪರ್‌ವೈಸರ್ ಹುದ್ದೆಯು ಖಾಲಿಯಿರುವುದನ್ನು ಪರಿಗಣಿಸಿ ಸಾಕಷ್ಟು ವರ್ಷಗಳಿಂದ ಬಾಕಿಯಿದ್ದ ಪೌರಕಾರ್ಮಿಕರ ಮುಂಭಡ್ತಿ ಪ್ರಕ್ರಿಯೆಗೆ ಹೆಚ್ಚಿನ ಮುತುವರ್ಜಿಯಿಂದ ಚಾಲನೆ ನೀಡಿ ಅದರಂತೆ ಪೌರಕಾರ್ಮಿಕರ ಜೇಷ್ಟತಾ ಪಟ್ಟಿಯನ್ನು ಅಂತಿಮಗೊಳಿಸಿ ಸೇವಾ ಹಿರಿತನದ ಆಧಾರದಲ್ಲಿ ಅರ್ಹ 24 ಪೌರಕಾರ್ಮಿಕರಿಗೆ ಗ್ರೂಪ್ ಸಿ ವೃಂದದ “ಸ್ಯಾನಿಟರಿ ಸುಪರ್‌ವೈಸರ್” ಹುದ್ದೆಗೆ ಏಕಕಾಲದಲ್ಲಿ ಮುಂಭಡ್ತಿ ಆದೇಶ ಹೊರಡಿಸಿದೆ.
ಪೌರಕಾರ್ಮಿಕರ ಸೇವೆಗೆ ಸಾರ್ಥಕ ಮನೋಭಾವ ಮೂಡಿಸಲು ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕೆಲಸದ ಮೇಲೆ ಪ್ರೇರಣೆ ಮೂಡಿಸುವ ಉದ್ದೇಶದಿಂದ , ಈ ದಿನ ಪೂರ್ವಾಹ್ನ ಮುಂಭಡ್ತಿ ಹೊಂದುವ ಪೌರಕಾರ್ಮಿಕರನ್ನು ಆಯುಕ್ತರ ಕಚೇರಿಗೆ ಆಹ್ವಾನಿಸಿ ಪೌರಕಾರ್ಮಿಕರಿಗೆ ಮುಂಭಡ್ತಿ ಆದೇಶವನ್ನು ಎಲ್ಲರಿಗೂ ವಿತರಿಸಿದರು.
ಈ ಸಮಯದಲ್ಲಿ ಆರೋಗ್ಯಾಧಿಕಾರಿ ಮತ್ತು ಶ್ರೀಮತಿ ಭಾರತಿ; ಕಚೇರಿ ಸಹಾಯಕರು ಹಾಗು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


