ಮಂಗಳೂರು ; ಹೌದು ಅದು ಹನ್ನೆರಡು ವರ್ಷಗಳ ಹಿಂದೆಯೇ ಸಂಚಾರಕ್ಕೆ ಯೋಗ್ಯ ಅಲ್ಲಾ ಅಂತ ಜಿಲ್ಲಾಧಿಕಾರಿಗಳೇ ಸರ್ಟಿಫೀಕೇಟ್ ನೀಡಿರುವ ಸೇತುವೆ. ಅದು ಹೇಗೋ ಹನ್ನೆರಡು ವರ್ಷದಿಂದ ವಾಹನಗಳ ಭಾರವನ್ನು ಹೊತ್ತುಕೊಂಡಿದ್ದ ಸೇತುವೆ ಸದ್ಯ ಕುಸಿಯುವ ಆತಂಕ ಎದುರಾಗಿದೆ. ಇದಕ್ಕೆ ಕಾರಣವಾಗಿರುವುದು ನೆನೆಗುದಿಗೆ ಬಿದ್ದಿರುವ ಹೊಸ ಸೇತುವೆಯ ಕಾಮಗಾರಿ ಅನ್ನೋದು ವಿಪರ್ಯಾಸ.ಆದರೆ ಇಲ್ಲಿ ಏನಾದರೂ ಅನಾಹುತ ನಡೆದರೆ ಇದಕ್ಕೆ ನೇರ ಕಾರಣ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು.
ಸೇತುವೆ ಸಂಚಾರಕ್ಕೆ ಯೋಗ್ಯವಲ್ಲ ಎಂದಿದ್ದ ಜಿಲ್ಲಾಧಿಕಾರಿ
ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾದ ಹೆದ್ದಾರಿ ಪ್ರಾಧಿಕಾರ
ಐದು ವರ್ಷವಾದ್ರೂ ಮುಗಿಯಲಿಲ್ಲ . 1952 ರಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಯಾವಾಗ ಕುಸಿದು ಬೀಳುತ್ತದೆಯೋ ಹೇಳಲಾಗದು. ಯಾಕಂದರೆ 12 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೇ ಈ ಸೇತುವೆ ಸಂಚಾರಕ್ಕೆ ಯೋಗ್ಯ ಅಲ್ಲಾ ಅಂತ ಸರ್ಟಿಫಿಕೇಟ್ ಕೊಟ್ಟಿದ್ದರು. ಹೀಗಾಗಿ ಕೆಲ ಕಾಲ ಈ ಪುರಾತನ ಸೇತುವೆಯ ಮೇಲೆ ಘನ ವಾಹನ ಸಂಚಾರ ಕೂಡಾ ನಿಶೇಧ ಮಾಡಲಾಗಿತ್ತು. ಆದರೆ ಒಂದೆರಡು ತಿಂಗಳ ಬಳಿಕ ಮತ್ತೆ ಯತಾವತ್ತಾಗಿ ವಾಹನಗಳು ಈ ಸೇತುವೆಯ ಮೇಲೆ ಓಡಾಡಲು ಆರಂಭಿಸಿದೆ. ಹನ್ನೆರಡು ವರ್ಷಗಳಲ್ಲಿ ವಾಹನದ ಸಂಖ್ಯೆ ಹೆಚ್ಚಾಗಿದ್ದು ಮಾತ್ರವಲ್ಲದೆ ಇದರ ಮೇಲೆ ಓಡಾಡುವ ಘನವಾಹನಗಳೂ ಕೂಡಾ ಹೆಚ್ಚಾಗಿದೆ. ಹೀಗಾಗಿ ಕೊನೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿ ಆರು ಲೇನ್ನ ಸೇತುವೆ ನಿರ್ಮಾಣಕ್ಕೆ ಮುಂದಾಗಿತ್ತು. ಆದ್ರೆ ಕಳೆದ ಐದು ವರ್ಷಗಳಲ್ಲಿ ಹೆದ್ದಾರಿ ಪ್ರಾಧಿಕಾರ ಮಾಡಿರೋ ಕಾಮಾಗಾರಿ ನಡೆಯದೆ ಇರುವುದರಿಂದ ಈ ಸೇತುವೆಯ ಮೇಲೆ ದಿನನಿತ್ಯ ಚಲಿಸೋ ಸವಾರರು ಪ್ರಾಣವನ್ನು ಕೈಯಲ್ಲಿಟ್ಟು ಹೊಗ್ತಾ ಇರೋದು ಕಂಡುಬಂದಿದೆ.
ಆಮೆಗತಿಯಲ್ಲಿ ಸಾಗುತ್ತಿರುವ ಈ ಸಿಕ್ಸ್ ಲೇನ್ ಬ್ರಿಡ್ಜ್ ಕಾಮಾಗಾರಿ ಬಹುಶಃ ಪಂಪ್ವೆಲ್ ಫ್ಲೈ ಓವರ್ ಕಾಮಾಗಾರಿಯನ್ನೇ ಮೀರಿಸಿದೆ. ಯಾಕೆಂದರೆ ಕೇವಲ 50 ಮೀಟರ್ ಸೇತುವೆ ನೀರ್ಮಾಣಕ್ಕೆ ಹೆದ್ದಾರಿ ಪ್ರಾಧಿಕಾರ 5 ವರ್ಷ ತೆಗೆದುಕೊಂಡಿದೆ. ಇಷ್ಟಾದ್ರೂ ಇನ್ನೂ ಪಿಲ್ಲರ್ ಕೂಡಾ ಎದ್ದಿಲ್ಲ ಅನ್ನೋದು ಒಂದೆಡೆಯಾದ್ರೆ , ಅಸಮರ್ಪಕ ಕಾಮಾಗಾರಿಯಿಂದ ಹಳೇ ಸೇತುವೆಗೂ ಅಪಾಯ ತಂದೊಡ್ಡಿದೆ ಎಂಬುದು ತಜ್ಞರ ಮಾತು.
ಈ ಬಗ್ಗೆ ಸ್ಥಳೀಯರು ಮಾತನಾಡಿ ಕುಂಟುತ್ತಾ ಸಾಗಿರುವ ಈ ಸೇತುವೆ ಕಾಮಾಗಾರಿಯಿಂದ ಸದ್ಯ ಹಳೆ ಸೇತುವೆ ಕುಸಿಯುವ ಭೀತಿಯಲ್ಲಿದೆ ಎಂದು ಹೇಳಿದ್ದಾರೆ. ಇನ್ನೂ ಪಿಲ್ಲರ್ ಅಳವಡಿಕೆಗೆ ಹಾಕಿರುವ ಮಣ್ಣಿನಿಂದ ನೀರಿನ ಹರಿವು ನಿಂತಿದ್ದು, ಮಳೆಗಾಲದಲ್ಲಿ ಕೃತಕ ನೆರೆಗೂ ಕೂಡಾ ಕಾರಣವಾಗಲಿದ್ದು ಇನ್ನು ಸಣ್ಣ ಪುಟ್ಟ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರಿಗೂ ಇದು ಕಂಟಕ ತಂದಿದೆ. ಈಗಾಗಲೇ ಈ ಸೇತುವೆ ನಿರ್ಮಾಣವನ್ನು ಚುರುಕು ಗೊಳಿಸಿ ಅಂತ ಹಲವಾರು ಪ್ರತಿಭಟನೆಗಳೂ ನಡೆದಿದೆ. ಆದ್ರೆ ಸ್ಥಳೀಯ ಜನಪ್ರತಿನಿಧಿಗಳ ಧಿವ್ಯ ಮೌನ, ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ಈಗ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಸೇತುವೆ ಮೇಲ್ಬಾಗದಲ್ಲಿ ಪ್ಯಾಚ್ ವರ್ಕ್ ಮಾಡಿ ರಸ್ತೆಯನ್ನೇನೋ ಸುಂದರ ಮಾಡಲಾಗಿದೆ. ಆದ್ರೆ ಸೇತುವೆಯ ತಳಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಸೇತುವೆಯ ಅಸಲಿ ಸತ್ಯವನ್ನು ಹೇಳುತ್ತಿದೆ. ಭಾರಿ ಗಾತ್ರದ ಘನವಾಹನಗಳು ಸಂಚರಿಸುವ ಈ ಹಳೇ ಸೇತುವೆ ಯಾವಾಗ ಕುಸಿದು ಬೀಳೋತ್ತೋ ದೇವರೇ ಬಲ್ಲ. ಹೀಗಾಗಿ ತಕ್ಷಣ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಹೆದ್ದಾರಿ ಪ್ರಾಧಿಕಾರದ ಕಿವಿ ಹಿಂಡುವ ಕೆಲಸ ಮಾಡಬೇಕಾಗಿದೆ ಎಂದು ಸ್ಥಳೀಯ ನಿವಾಸಿ ಫ್ರಾಂಕ್ಲಿನ್ ಮೊಂತೆರೊ ತಿಳಿಸಿದ್ದಾರೆ.


