ಭಾಲ್ಕಿ : ನೂರಾರು ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಮನ ಸೆಳೆಯಿತು. ಸ್ವಯಂಸೇವಕರು ಅತ್ಯಂತ ಶಿಸ್ತು ಮತ್ತು ಶ್ರದ್ಧೆಯಿಂದ ಹೆಜ್ಜೆ ಹಾಕಿದರು.
ಭಾಲ್ಕಿ ಪಟ್ಟಣದ ಬೊಂಮಗೊಂಡೇಶ್ವರ ವೃತದಿಂದ ಆರಂಭಗೊಂಡ ಪಥಸಂಚಲನ ಹಳೆ ಪಟ್ಟಣ , ಬಸ್ ನಿಲ್ದಾಣ ಎದುರುಗಡೆ ಮುಖ್ಯ ರಸ್ತೆ, ಅಂಬೇಡ್ಕರ್ ವೃತ, ಗಾಂಧಿವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ನೆರವೇರಿತು
ಕಂದು ಬಣ್ಣದ ಪ್ಯಾಂಟ್, ಬಿಳಿ ಅಂಗಿ, ಕರಿ ಬಣ್ಣದ ಟೋಪಿ ಧರಿಸಿ ಕೈಯಲ್ಲೊಂದು ದಂಡ ಹಿಡಿದಿದ್ದ ನೂರಾರು ಸ್ವಯಂಸೇವಕರು ಘೋಷ್ ವಾದ್ಯದೊಂದಿಗೆ ಕವಾಯತ್ತಿನಲ್ಲಿಸಾಗಿಬಂದರು. ಸಂಚಲನದ ಉದ್ದಕ್ಕೂ ಸ್ವಯಂಸೇವಕರು ತೋರಿದ ಶಿಸ್ತು ಹಾಗೂ ಹೆಜ್ಜೆ ಹಾಕುತ್ತಿದ್ದ ಗಾಂಭೀರ್ಯ ನೋಡುಗರ ಮನ ಸೆಳೆದು ರಾಷ್ಟ್ರಭಕ್ತಿ ಪ್ರಕಟಿಸುವಲ್ಲಿಯಶಸ್ವಿಯಾಯಿತು. ಘೋಷ್ ವಾದ್ಯ ಮೇಳ ಸಂಚಲನದ ಮೆರಗು ಹೆಚ್ಚಿಸಿತ್ತು. ಡ್ರಮ್ ಬಾರಿಸುತ್ತಾ ಸಾಗುತ್ತಿದ್ದ ಸ್ವಯಂಸೇವಕರು ಹೊಸ ಕಳೆ ತಂದುಕೊಟ್ಟರು. ರಸ್ತೆಗಳ ಅಕ್ಕ-ಪಕ್ಕ, ತಿರುವು, ವೃತ್ತ ಹಾಗೂ ಕಟ್ಟಡಗಳ ಮೇಲೆ ನಿಂತಿದ್ದ ಮಹಿಳೆಯರು ಪುಷ್ಪ ಸಮರ್ಪಿಸಿ ಭಾರತ್ ಮಾತಾಕೀ ಜೈ ಘೋಷಣೆ ಮೊಳಗಿಸಿದರು.
ಸಂಚಲನದ ಮಾರ್ಗಗಳು ರಂಗೋಲಿ ಚಿತ್ತಾರಗಳಿಂದ ಅಲಂಕಾರಗೊಂಡಿದ್ದವು. ಅಲ್ಲಲ್ಲಿಆಳೆತ್ತರದ ಕೇಸರಿ ಧ್ವಜ, ಕೆಲವು ಮನೆಗಳ ಎದುರು ಭಾರತ ಮಾತೆಯ ಭಾವಚಿತ್ರ ಇರಿಸಿ ವಿಶೇಷ ಪೂಜೆ ಸಲ್ಲಿಸಿದ್ದು ಕಂಡು ಬಂದಿತು.
ಭಗವಾಧ್ವಜಕ್ಕೆ ದಾರಿಯುದ್ದಕ್ಕೂ ಮನೆಗಳ ಎದುರು ಮಹಿಳೆಯರು ಆರತಿ ಬೆಳಗುವ ಮೂಲಕ ಸಾಂಪ್ರದಾಯಿಕ ಗೌರವ ಸಲ್ಲಿಸಿದರು. ಹಿಂದೂಪರ ಸಂಘಟನೆಗಳ ಸದಸ್ಯರು ಭಗವಾಧ್ವಜದ ಮೇಲೆ ಪುಷ್ಪವೃಷ್ಟಿ ಸುರಿಸಿದರು.


