ಬೆಳ್ಮಣ್ ; ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ಬೆಳ್ಮಣ್ ಪೇಟೆಯಲ್ಲಿ ಹಾದು ಹೋಗುತ್ತಿದ್ದ ವೇಳೆ ಬೈಕ್ ಮೇಲೆ ಬೃಹತ್ ಮರವೊಂದು ಬಿದ್ದು ಬೈಕ್ ಸವಾರನೋರ್ವ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಪಿಲಾರದ ಪ್ರವೀಣ್ (30) ಮೃತ ವ್ಯಕ್ತಿ. ರಾತ್ರಿ 9.30ರ ಸುಮಾರಿಗೆ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರವೀಣ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ಬೃಹತ್ ಗಾತ್ರದ ಮರ ಬುಡಮೇಲಾಗಿ ಆತನ ಮೇಲೆ ಬಿದ್ದಿದೆ. ತಕ್ಷಣ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು.
ಎರಡು ಸೆಕೆಂಡುಗಳ ಹಿಂದೆ ಇದೇ ರಸ್ತೆಯಲ್ಲಿ ಗೂಡ್ಸ್ ಟೆಂಪೋವೊಂದು ಹಾದು ಹೋಗಿದ್ದು, ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


