ಬೆಳ್ತಂಗಡಿ : ನಾಳ ದೇವಸ್ಥಾನದಲ್ಲಿ ಧನು ಪೂಜೆಗೆಂದು ಇಂದು ಬೆಳಗಿನ ಜಾವ ಮನೆಯಿಂದ ಹೊರಟು ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ನಂತರ ಮನೆಯ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸಂಬೋಲ್ಯ-ಬರಮೇಲು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲಕನ ಅಸಹಜ ಸಾವಿನ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿವೆ. ಮೃತನನ್ನು ಕುವೆಟ್ಟು ಗ್ರಾಮದ ಸಂಬೋಲ್ಯ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಸುಮಂತ್ (15) ಎಂದು ಗುರುತಿಸಲಾಗಿದೆ. ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ.
ಸುಮಂತ್ ಮತ್ತು ಇತರ ಇಬ್ಬರು ಹುಡುಗರು ಪ್ರತಿದಿನ ಧನು ಪೂಜೆಗಾಗಿ ನಾಳ ದೇವಸ್ಥಾನಕ್ಕೆ ಭೇಟಿ ತೆರಳುತ್ತಿದ್ದರು ಎಂದಿನಂತೆ ಇಂದು ಮಕರ ಸಂಕ್ರಾಂತಿಯ ಪ್ರಯುಕ್ತ ಬೆಳಿಗ್ಗೆ 4:00 ಗಂಟೆ ಸುಮಾರಿಗೆ ಸುಮಂತ್ ಮನೆಯಿಂದ ದೇವಸ್ಥಾನಕ್ಕೆ ಹೊರಟಿದ್ದಾನೆ. ಆದರೆ ನಿರೀಕ್ಷಿತ ಸಮಯದಲ್ಲಿ ದೇವಸ್ಥಾನವನ್ನು ತಲುಪದಿದ್ದ ಹಿನ್ನೆಲೆ ಜೊತೆಯಲ್ಲಿ ದಿನನಿತ್ಯ ಹೊರಡುತ್ತಿರುವ ಗೆಳೆಯರು ದೇವಸ್ಥಾನಕ್ಕೆ ತೆರಳಿದ್ದಾರೆ.
ಸುಮಂತ್ ಮನೆಗೆ ಬಾರದ ಹಿನ್ನೆಲೆ ಮನೆಯವರು ಗೆಳೆಯನಿಗೆ ಫೋನ್ ಮಾಡಿದ್ದಾರೆ. ಬಳಿಕ ಹುಡುಕಾಟ ನಡೆಸಿದ್ದು ಸುಮಂತ್ ಸಾಮಾನ್ಯವಾಗಿ ಹೋಗುವ ಮಾರ್ಗದಲ್ಲಿ ಕೊಳದ ಬಳಿ ರಕ್ತದ ಕಲೆಗಳು ಕಂಡುಬಂದಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು ಬೆಳಿಗ್ಗೆ 11:30 ರ ಸುಮಾರಿಗೆ, ಸುಮಂತ್ ಮೃತದೇಹ ಕೊಳದಲ್ಲಿ ಪತ್ತೆಯಾಗಿದೆ. ಅವರ ತಲೆಯ ಮೇಲೆ ತೀವ್ರವಾದ ಗಾಯಗಳಾಗಿದ್ದು ಚಿರತೆ ಚಲನವಲನಕ್ಕೆ ಹೆಸರುವಾಸಿಯಾದ ಪ್ರದೇಶವಾದ್ದರಿಂದ, ಸಾವಿಗೆ ಅನುಮಾನ ಹುಟ್ಟುಹಾಕಿದೆ.


