ಬೆಳಗಾವಿ : ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ ಘಟನೆ ಬೈಲಹೊಂಗಲ ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ನಿವಾಸಿ ಪ್ರಜ್ವಲ್ ಚನಗೌಡ ಮುನೇಪ್ಪನವರ(18) ಮೃತ ದುರ್ದೈವಿ ಯುವಕ. ನವೆಂಬರ್ 1ರಂದು ರಾಜ್ಯೋತ್ಸವಕ್ಕೆ ಗ್ರಾಮದ ಬಸ್ ನಿಲ್ದಾಣದ ಮುಂದೆ ಧ್ವಜಸ್ತಂಭ ನಿರ್ಮಿಸಿ ಅಂದು ಧ್ವಜಾರೋಹಣಕ್ಕೆ ಗ್ರಾಮದ ಯುವಕರು ಸಿದ್ಧತೆ ನಡೆಸಿದ್ದರು.
ಶನಿವಾರ ಸಂಜೆ ಧ್ವಜಸ್ತಂಭ ನೆಡುವಾಗ ಅಲ್ಲಿಯೇ ಹಾಯ್ದು ಹೋಗಿದ್ದ ಸರ್ವೀಸ್ ವಾಯರ್ ಗೆ ಕಂಬವು ತಾಗಿದೆ. ಕಂಬ ಹಿಡಿದಿದ್ದ ಪ್ರಜ್ವಲ್ ಗೆ ವಿದ್ಯುತ್ ಪ್ರವಹಿಸಿದೆ. ಕೂಡಲೇ ಆತನನ್ನು ಬೈಲಹೊಂಗಲ ತಾಲ್ಲೂಕಾಸ್ಪತ್ರೆಗೆ ದಾಖಲಿಸಲಾಯ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ ಕೊನೆಯುಸಿರೆಳೆದಿದ್ದಾನೆ.
ಮನೆ ಮಗನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇದ್ದ ಒಬ್ಬ ಮಗನನ್ನು ಚನ್ನಾಗಿ ಓದಿಸಿ, ನೂರಾರು ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿಗೆ ಈಗ ದಿಕ್ಕೆ ತೋಚದಾಗಿದೆ.
ಅಗ್ನಿವೀರ್ ಪರೀಕ್ಷೆ ಪಾಸ್ ಆಗಿದ್ದ ಯುವಕ ಪ್ರಜ್ವಲ್, ದೈಹಿಕ ಪರೀಕ್ಷೆಗೆ ತಯಾರಾಗುತ್ತಿದ್ದ. ಅಷ್ಟರೊಳಗೆ ಈ ರೀತಿ ದುರಂತ ಸಂಭವಿಸಿರೋದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತದೇಹ ಬೈಲಹೊಂಗಲ ತಾಲ್ಲೂಕಾಸ್ಪತ್ರೆಯ ಶವಾಗಾರದಲ್ಲಿದ್ದು, ಇಂದು ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


