ಬೆಳಗಾವಿ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲೂಕಿನ ಉಗರಗೋಳ ಸಮೀಪದ ಹರ್ಲಾಪುರದಲ್ಲಿ ವಿಧವೆಯೊಬ್ಬಳನ್ನು ಬೆತ್ತಲೆಗೊಳಿಸಿ ಕ್ರೌರ್ಯ ಮೆರೆದಿರುವ ಅಮಾನವೀಯ ಘಟನೆ ನಡೆದಿದೆ.
ಹರಿದ ಬಟ್ಟೆಯಲ್ಲಿ ಠಾಣೆಗೆ ಹೋದರೂ ಕೂಡ ಪೊಲೀಸರು ಇಲ್ಲಿಯವರೆಗೆ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ೩೫ ವರ್ಷದ ಸಂತ್ರಸ್ತೆ ಆರೋಪಿಸಿದ್ದಾರೆ. ಉಗರಗೋಳದ ಹರ್ಲಾಪುರದಲ್ಲಿ ನಡೆದ ಘಟನೆ ಬಗ್ಗೆ ಸಂತ್ರಸ್ತೆ ಆಮೂಲಾಗ್ರವಾಗಿ ವಿವರಿಸಿದ್ದಾರೆ.
ಅಷ್ಟೇ ಅಲ್ಲ ಆಕೆ ಕೆಲವೊಂದು ವಿಡಿಯೋ ತುಣುಕು, ಆಡಿಯೋ ಸಂಭಾಷಣೆ, ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಪೊಲೀಸರು ಇದ್ದ ವಿಡಿಯೋ ಎಲ್ಲವನ್ನೂ ಸಾಕ್ಷಿಯಾಗಿಟ್ಟುಕೊಂಡು ಈಗ ನ್ಯಾಯ ಕೋರಿ ಮಾಧ್ಯಮದ ಮೊರೆ ಹೋಗಿದ್ದಾರೆ.
ಏನಿದು ಘಟನೆ ?: ಹರ್ಲಾಪುರದ ಹತ್ತು ಎಕರೆ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಇದು. ಈ ಜಮೀನು ವಿವಾದಕ್ಕೆ ಕೋರ್ಟ್ನಿಂದ ತಡೆಯಾಜ್ಞೆ ಕೂಡ ಇತ್ತು. ಜಮೀನಿನಲ್ಲಿ ಬೆಳೆದ ಹುರುಳಿ ಒಂದೆಡೆ ಕೂಡಿಹಾಕಿ ಚೀಲ ತುಂಬಬೇಕು ಎನ್ನುವಾಗ ರೈತ ಸಂಘದ ಹೆಸರಿನಲ್ಲಿ ಸುಮಾರು 15 ಕ್ಕೂ ಹೆಚ್ಚು ಜನ ಬಂದು ನಮ್ಮೊಂದಿಗೆ ವಾದ ಮಾಡಿದರು. ಕೋರ್ಟ್ ತಡೆಯಾಜ್ಞೆ ಇದೆ ಎಂದು ಹೇಳಿದರೂ ಕೇಳಲಿಲ್ಲ. ಬದಲಾಗಿ ಅವರು ನನಗೆ ಬಾಂಡ್ ಬರೆದುಕೊಟ್ಟಿದ್ದಾರೆ ಎಂದು ಹೇಳಿ ಅಲ್ಲಿದ್ದ ಹುರುಳಿ ತುಂಬಿಕೊಂಡು ತೆಗೆದುಕೊಂಡುಹೊರಟರು. ಆಗ ವಾದ ವಿವಾದ ನಡೆಯಿತು. ಈ ಸಂದರ್ಭದಲ್ಲಿ ಕೆಲವರು ನನ್ನ ಫೋನ್ ಕಸಿದುಕೊಂಡು ನೆಲಕ್ಕೆ ಬೀಳಿಸಿ ಹೊಡೆದರು. ನಂತರ ನನಗೆ ಒದ್ದರು. ಇದರಿಂದ ಗರ್ಭಕೋಶಕ್ಕೂ ಪೆಟ್ಟಾಯಿತು, ರಕ್ತಸ್ರಾವವಾಯಿತು. ಅಷ್ಟಕ್ಕೇ ಬಿಡದ ನನ್ನ ಮೈಮೇಲಿನ ಬಟ್ಟೆ ಹರಿದು ಬೆತ್ತಲೆಗೊಳಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ.


