ಬೆಂಗಳೂರು : ಶಕ್ತಿ ಯೋಜನೆ, ಡೀಸೆಲ್ ದರ ಏರಿಕೆ ಸೇರಿದಂತೆ ಇತ್ಯಾದಿ ಕಾರಣಗಳಿಂದ ನಷ್ಟಕ್ಕೆ ಸಿಲುಕಿರುವ ಸರ್ಕಾರ ಈಗ ಕೊನೆಗೆ ಅನಿವಾರ್ಯವಾಗಿ ಬಸ್ ಟಿಕೆಟ್ ದರವನ್ನು 15% ಏರಿಕೆ ಮಾಡಿದೆ. ಸಚಿವ ಸಂಪುಟ ಟಿಕೆಟ್ ದರ ಏರಿಕೆ ಮಾಡುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಡಬ್ಲ್ಯುಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಈ ಹಿಂದೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಡೀಸೆಲ್ ಬೆಲೆಯ ಏರಿಕೆಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಬಿಎಂಟಿಸಿ ಬಸ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷವಾಗಿದೆ. ಹೀಗಾಗಿ ಇಂದಿನ ಕ್ಯಾಬಿನೆಟ್ ಸಭೆಯ ಬಳಿಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದರ ಏರಿಕೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.
ನಾಲ್ಕು ನಿಗಮಗಳಿಂದ ಬೇರೆ ಬೇರೆ ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಬಿಎಂಟಿಸಿಯಿಂದ 42%, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿಯಿಂದ 25%, ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಿಂದ 28% ದರ ಏರಿಕೆಗೆ ಪ್ರಸ್ತಾವನೆ ಬಂದಿತ್ತು. ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲಿ ನಾಲ್ಕು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅದರ ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ.