ಬೆಂಗಳೂರು : ವಿವಿಧ ಇಲಾಖೆಗಳಲ್ಲಿ ವರ್ಗಾವಣೆಗೊಂಡ ಬಳಿಕ ಯಾವುದೇ ಸ್ಥಳ ನಿಯುಕ್ತಿ (ಪೋಸ್ಟಿಂಗ್) ನೀಡದೆ, ಕಾರಣಾಂತರಗಳಿಂದ ಹಾಗೆಯೇ ಉಳಿಸಿಕೊಂಡಿರುವ ಅಧಿಕಾರಿಗಳು ಹಾಗೂ ನೌಕರರ ವಿವರಗಳನ್ನು ಸರ್ಕಾರ ಸಂಗ್ರಹಿಸಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡುವಂತೆ ಲೋಕಾಯುಕ್ತರು ಸರ್ಕಾರಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ತಮ್ಮ ಇಲಾಖೆಯಲ್ಲಿ ವಿವಿಧ ಹಂತದ ಅಧಿಕಾರಿಗಳು ಮತ್ತು ನೌಕರರನ್ನು ವರ್ಗಾವಣೆ ಮಾಡಿದ ಬಳಿಕ ಇದುವರೆಗೆ ಯಾವುದೇ ಪೋಸ್ಟಿಂಗ್ ನೀಡದೆ ಉಳಿಸಿಕೊಂಡಿರುವವರ ಸಂಖ್ಯೆ ಎಷ್ಟು, ಎಷ್ಟು ದಿನಗಳಿಂದ ಪೋಸ್ಟಿಂಗ್ ನೀಡದೆ ಉಳಿಸಲಾಗಿದೆ ಹಾಗೂ ಅದಕ್ಕೆ ಕಾರಣಗಳೇನು ಎಂಬುದೂ ಸೇರಿದಂತೆ ಅಗತ್ಯ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ.
ಈ ಮಾಹಿತಿಯನ್ನು ಸೆಪ್ಟೆಂಬರ್ 9ರೊಳಗೆ ಸಲ್ಲಿಸುವಂತೆ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೋಕಾಯುಕ್ತರು ಕೇಳಿರುವ ಮಾಹಿತಿಯ ಹಿನ್ನೆಲೆಯಲ್ಲಿ ಈ ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು, ಮಾಹಿತಿ ಲಭ್ಯವಾದ ಬಳಿಕ ಅದನ್ನು ಲೋಕಾಯುಕ್ತರಿಗೆ ಸಲ್ಲಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.

