ಬೆಂಗಳೂರು: ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿತ್ತು. ಗೆಲುವು ಸಾಧಿಸಿದ ಕಾಂಗ್ರೆಸ್ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ ಪರ ಜೈಕಾರ ಕೂಗಿ ಉದ್ಧಟತನ ಮೆರೆದಿದ್ದಾರೆ. ನಮ್ಮ ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧವನ್ನು ವಿಧಾನಸೌಧದೊಳಗೆ ಮಾಡಿರುವುದು ಮತ್ತೊಂದು ದುರಂತವಾಗಿದೆ.
ಘಟನೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಆರ್ ಅಶೋಕ, ‘ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ನಾಚಿಕೆ ಇಲ್ಲ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯಪಾಲರು ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾ ಮಾಡಲಿ, ಈ ಪಾಕ್ ಪರ ಘೋಷಣೆ ಕೂಗಿರುವ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ ನಡೆಸಿದರು.
ಈ ಕುರಿತು ಎಕ್ಸ್ನಲ್ಲಿ ‘ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಈ ಘಟನೆ ಕಾಂಗ್ರೆಸ್ ಪಕ್ಷದ ವಿಕೃತ, ದೇಶದ್ರೋಹಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದೆ. ಚುನಾವಣೆಯಲ್ಲಿ ಗೆದ್ದಿದ್ದರೆ ನಿಮ್ಮ ಅಭ್ಯರ್ಥಿಗಳಿಗೆ ಜೈಕಾರ ಹಾಕಿ, ನಿಮ್ಮ ಪಕ್ಷಕ್ಕೆ ಜೈಕಾರ ಹಾಕಿ, ನಿಮ್ಮ ನಾಯಕರಿಗೆ ಜೈಕಾರ ಹಾಕಿ, ಅದು ಬಿಟ್ಟು ಪಾಕಿಸ್ತಾನ ಜಿಂದಾಬಾದ್ ಎಂದು ನಿಮ್ಮ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗುತ್ತಾರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ಮೂರು ರಾಜ್ಯಸಭೆ ಸ್ಥಾನ ಗೆದ್ದ ಮಾತ್ರಕ್ಕೆ ಮತೊಮ್ಮೆ ದೇಶ ವಿಭಜನೆ ಮಾಡಬಹುದು ಎಂದು ಕೊಂಡಿದ್ದೀರಾ?, ಪಾಕಿಸ್ತಾನ ಜಿಂದಾಬಾದ್ ಎಂಬುದೇ ಕಾಂಗ್ರೆಸ್ ಪಕ್ಷದ ಆತ್ಮಸಾಕ್ಷಿನಾ ಡಿಕೆ ಶಿವಕುಮಾರ್ ಅವರೇ ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 153 ಬಿ(ರಾಷ್ಟ್ರೀಯ ಸಮಗ್ರತೆ ಧಕ್ಕೆ ತರುವ ಹೇಳಿಕೆ) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಆರೋಪದ ಅಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ, ಜ್ಯೋತಿ ಗಣೇಶ್ ಅವರನ್ನೊಳಗೊಂಡ ಬಿಜೆಪಿ ನಿಯೋಗ ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಅಲ್ಲದೇ ಪಾಕ್ ಪರ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕೆಂದು ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದರು.


