ಬೆಂಗಳೂರು ; ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭೃಷ್ಟಚಾರದಿಂದ ಕೂಡಿದ್ದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೂಡ ಹಗರಣದಲ್ಲಿ ಭಾಗಿಯಾಗಿದ್ದಾರೆಂದ ಆರೋಪ ಕೇಳಿಬಂದಿದೆ.
ರಾಜ್ಯದಲ್ಲಿ ನಡೆದಿರುವವ ಬಹು ಕೋಟಿ ವಾಲ್ಮೀಕಿ ನಿಗಮದ ಹಗರಣ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ತಲೆನೋವು ತಂದಿದೆ. ಇಂದು ಪ್ರಕರಣ ಸಂಬಂಧ ದಿಢೀರ್ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬರೋಬ್ಬರಿ 19 ಕಡೆ ದಾಳಿ ನಡೆದಿದೆ. ಈ ಪೈಕಿ ಮಾಜಿ ಸಚಿವ ನಾಗೇಂದ್ರ ಮನೆಯಲ್ಲಿ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸುತ್ತಿದೆ.ಕಳೆದ 24 ಗಂಟೆಗಳಿಂದ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಮಾಜಿ ಸಚಿವ ನಾಗೇಂದ್ರಗೆ ಬಂಧನ ಭೀತಿ ಶುರುವಾಗಿದೆ. ಆದರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹಗರಣದಲ್ಲಿ ಮಾಜಿ ಸಚಿವರ ಪಾತ್ರವಿಲ್ಲ, ಅಧಿಕಾರಿಗಳು ದುಡ್ಡು ತಿಂದಿದ್ದಾರೆ ಎಂದಿದ್ದಾರೆ. ಅಷ್ಟೋಂದು ದೊಡ್ಡ ಮಟ್ಟದಲ್ಲಿ ಅಧಿಕಾರಿಗಳು ದುಡ್ಡು ತಿನ್ನೊದಾದರೆ ನೀವೆನು ಕತ್ತೆ ಕಾಯ್ತ ಇದ್ದೀರ ಎಂದು ಜನಸಾಮನ್ಯರು ಪ್ರಶ್ನೆ ಹಾಕಿದ್ದಾರೆ.
ಸಚಿವ ನಾಗೇಂದ್ರ ನಿವಾಸದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಿಂದ ಇಡಿ ಪರಿಶೀಲನೆ ನಡೆಯುತ್ತಿದೆ. ಶಾಸಕ ದದ್ದಲ್ ಮನೆ, ನಿವಾಸ ಸೇರಿ ಉಳಿದ ಕಡೆಯೂ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಒಟ್ಟು ಹದಿನೆಂಟು ಕಡೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ರಾತ್ರಿ ಹನ್ನೆರಡು ಗಂಟೆಗೆ ಅಧಿಕಾರಿಗಳು ದಾಳಿಗೆ ವಿರಾಮ ನೀಡಿದ್ದರು. ಆದರೆ ದಾಳಿ ಮಾಡಿದ್ದ ಸ್ಥಳದಲ್ಲೆ ಉಳಿದುಕೊಂಡಿದ್ದರು.
ಒಂದು ತಂಡ ನಾಗೇಂದ್ರ ನಿವಾಸದಲ್ಲಿ ಹಾಗೂ ಇನ್ನೊಂದು ತಂಡ ದದ್ದಲ್ ನಿವಾಸದಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ 6:30-7 ಗಂಟೆ ಬಳಿಕ ಮತ್ತೆ ಪರಿಶೀಲನೆ ಆರಂಭಿಸಿದ್ದಾರೆ. ಇಂದು ಸಹ ಪೂರ್ತಿ ದಿನ ವಿಚಾರಣೆ ನಡೆಯಲಿದೆ ಎಂದು ಊಹಿಸಲಾಗಿದೆ. ದಾಳಿ ಮಾಡಿರುವ ಎಲ್ಲಾ ಕಡೆ ಸಮಗ್ರ ತಪಾಸಣೆ ಮುಗಿಯುವವರೆಗೂ ಅಧಿಕಾರಿಗಳು ಸ್ಥಳ ಬಿಟ್ಟು ಕದಲುವುದಿಲ್ಲ.
ನಿನ್ನೆ ಒಂದೇ ಕಾಲಕ್ಕೆ ಹದಿನೆಂಟಕ್ಕೂ ಹೆಚ್ಚು ಸ್ಥಳದಲ್ಲಿ ತಪಾಸಣೆ ನಡೆಸಲಾಗಿತ್ತು. ಎಲ್ಲಾ ದಾಳಿ ಸ್ಥಳಗಳಲ್ಲಿ ಏನೆಲ್ಲಾ ದೊರೆತಿದೆ ಎಂದು ಪರಿಶೀಲನೆ ಮಾಡಿ, ನಂತರ ಇಂಟರ್ ಲಿಂಕ್ ಹೊಂದಿರುವ ಸ್ಥಳದಲ್ಲಿ ಮತ್ತೆ ದಾಖಲೆಗಳ ಪರಿಶೀಲನೆ ನಡೆಯುವುದಿದೆ.
ನಿನ್ನೆ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ನನ್ನು ಇಡಿ ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಇಂದು ಅಗತ್ಯ ಬಿದ್ದಲ್ಲಿ ಶಾಸಕ ದದ್ದಲ್‌ರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಯಲಹಂಕ ಬಳಿ ಇರುವ ದದ್ದಲ್ ನಿವಾಸದಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ನಾಗೇಂದ್ರ ಅವರ ಬಂಧನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ನಿವಾಸಗಳ ಜತೆಗೆ ಮೂವರು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮನೆಯ ಮೇಲೂ ಇಡಿ ದಾಳಿ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವಾದ್ದರಿಂದ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಗೂ ಇಡಿ ರೇಡ್ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಆರೋಪಿ ಸತ್ಯನಾರಾಯಣ್‌ನಿಂದ ವಾಲ್ಮೀಕಿ ನಿಗಮದ ಎಂ.ಡಿ. ಪದ್ಮನಾಭ್ ಹಣ ತಂದಿದ್ದರು ಎನ್ನಲಾಗಿದೆ. ಆ ಹಣದಲ್ಲಿ ನಾಗೇಂದ್ರ ಪಿಎ ಹರೀಶ್ 25 ಲಕ್ಷ ಹಣ ಪಡೆದಿದ್ದ. ದದ್ದಲ್ ಪಿಎ ಪಂಪಣ್ಣ ಕೂಡ 55 ಲಕ್ಷ ಹಣ ಪಡೆದಿದ್ದ. ಈ ಬಗ್ಗೆ ಪರಿಶೀಲನೆ ವೇಳೆ ಹರೀಶ್ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಆತನನ್ನು ಇಡಿ ವಶಕ್ಕೆ ಪಡೆದಿದೆ.
ಪ್ರಕರಣದಲ್ಲಿ ಸಚಿವ ನಾಗೇಂದ್ರ ಪರ 50 ರಿಂದ 60 ಕೋಟಿ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಹರೀಶ್‌ನ ವಶಕ್ಕೆ ಪಡೆದಿದ್ದು, ಹರೀಶ್ ಹೇಳಿಕೆ ಆಧರಿಸಿ ಮಾಜಿ ಸಚಿವ ನಾಗೇಂದ್ರ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ.