ಬೆಂಗಳೂರು : ದೇವಾಲಯ, ವಿವಿಧ ಸಂಸ್ಥೆಗಳು ಹಾಗೂ ರೈತರ ಜಮೀನನ್ನು ವಕ್ಫ್ ಹೆಸರಿನಲ್ಲಿ ಕಬಳಿಕೆ ಮಾಡುತ್ತಿರುವುದುನ್ನು ಸಂಪೂರ್ಣ ಹಿಂದಕ್ಕೆ ಪಡೆಯುವವರೆಗೆ ನಿರಂತರ ಹೋರಾಟ ಮಾಡುವುದು. ವಕ್ಫ್ ಹೆಸರಿನಲ್ಲಿ ಭೂಮಿ ಕಬಳಿಸಿ ಹಿಂದುಳಿಗೆ ಕಿರುಕುಳ ಕೊಡುತ್ತಿರುವ ಮಂತ್ರಿಗಳು,ಅಧಿಕಾರಿಗಳು, ರಾಜಕಾರಣಿಗಳು ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ನಿರ್ಣಯಗಳನ್ನು ವಿಶ್ವ ಹಿಂದೂ ಪರಿಷತ್-ಕರ್ನಾಟಕ ಕೈಗೊಂಡಿದೆ.
ವಿವಿಪುರಂ ನಲ್ಲಿರುವ ವಾಸವಿ ವಿದ್ಯಾನಿಕೇತನ ಸಭಾಂಗಣದಲ್ಲಿ ನಡೆದ ಸಂತ ಮಾರ್ಗದರ್ಶಕರ ಮಂಡಳಿಯ ಸಮಾವೇಶದಲ್ಲಿ ವಿಶ್ವ ಹಿಂದೂ ಪರಿಷದ್ ಹಲವು ನಿರ್ಣಯಗಳನ್ನು ಕೈಗೊಂಡಿತು. ಅಲ್ಲದೆ ಈ ನಿರ್ಣಯಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಪೇಜಾವರ ಶ್ರೀಗಳು ಉಡುಪಿ ಹಾಗೂ ವಿಶ್ವ ಹಿಂದೂ ಪರಿಷದ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಸೇರಿದಂತೆ ಹಲವು ಸಂತರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಕೈಗೊಂಡ ನಿರ್ಣಯಗಳು :
ವಕ್ಫ್ ಹೆಸರಿನಲ್ಲಿ ಭೂಕಬಳಿಕೆ ಪ್ರಕರಣಗಳಲ್ಲಿ ಹಿಂದೂಗಳು ಫಿರ್ಯಾದಿದಾರರಾಗಿದ್ದರೆ ಅವರಿಗೆ ನೀಡಿದ ನೋಟಿಸ್ಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು. ಮತ್ತು ಭೂಮಿಯನ್ನು ಮರಳಿಸಬೇಕು. ಇತ್ತೀಚೆಗೆ ರಾಜ್ಯ ಸರ್ಕಾರ 2750 ಎಕರೆ ಸರ್ಕಾರಿ ಭೂಮಿಯನ್ನು ಖಬರ್ಸ್ಥಾನದ ಹೆಸರಿನಲ್ಲಿ ವಕ್ಫ್ಗೆ ಹಸ್ತಾಂತರಿಸಲು ಆದೇಶ ನೀಡಿದೆ. ಸರ್ಕಾರಿ ಜಮೀನು ಲಭ್ಯ ಇಲ್ಲದಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದೇಶ ಅನುಷ್ಠಾನಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು ಕೂಡಲೇ ಆದೇಶವನ್ನು ಹಿಂದಕ್ಕೆ ಪಡೆಯಬೇಕು.
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯನ್ನು ಸಂತ ಸಮಾಜ ಸಂಪೂರ್ಣವಾಗಿ ಬೆಂಬಲಿಸುವುದು. ಇಸ್ಲಾಮೀಕರಣ ತಡೆಯಲು ಹಿಂದೂಗಳು ಜಾತಿಭೇದ, ಬಡವ, ಶ್ರೀಮಂತ ಎಂಬ ಭೇದ ಇಲ್ಲದೆ ಸಮಸ್ತ ಹಿಂದೂಗಳು ಸಕ್ರಿಯವಾಗಿ ಭಾಗಿಯಾಗಬೇಕು. ಇಡೀ ರಾಜ್ಯದಲ್ಲಿ ಇಸ್ಕಾಮೀಕರಣದ ವಿರುದ್ಧ ಹೋರಾಡಲು ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಸಂಪರ್ಕಿಸಿ ಸAಘಟಿಸಬೇಕು. ಸರ್ಕಾರ ದೇವಾಲಯಗಳ ಆಡಳಿತ ಮಂಡಳಿಗಳಿಗೆ ನೇಮಕಾತಿ ಮಾಡುವುದನ್ನು ನಿಲ್ಲಿಸಿ ಹಿಂದೂ ಸಮಾಜದವರೇ ನೇಮಕಾತಿ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು. ದೇವಾಲಯದ ಎಲ್ಲ ಭೂಮಿಯನ್ನು ದೇವಾಲಯದ ಟ್ರಸ್ಟ್ ಹೆಸರಿಗೆ ನೋಂದಾಯಿಸಬೇಕು. ದೇವಾಲಯದ ಭೂಮಿಯನ್ನು ಪರಭಾರೆ ಮಾಡಿದ್ದರೆ ಅದನ್ನು ಮರಳಿ ದೇವಾಲಯಕ್ಕೆ ಬಿಟ್ಟುಕೊಡಬೇಕು. ಲವ್ ಜಿಹಾದ್ ಹಾಗೂ ಮತಾಂತರ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸಂತ ಮಾರ್ಗದರ್ಶಕ ಮಂಡಳಿ ನಿರ್ಣಯ ಕೈಗೊಂಡಿದೆ.


