Tuesday, March 4, 2025
Flats for sale
Homeರಾಜ್ಯಬೆಂಗಳೂರು : ರಾಜ್ಯದಲ್ಲಿ ಹೆಚ್ಚಾದ ಬಿಸಿಲಿನ ಧಗೆ,ಇನ್ನು ಮೂರು ತಿಂಗಳು ಹೀಟ್ ಸ್ಟ್ರೋಕ್…!

ಬೆಂಗಳೂರು : ರಾಜ್ಯದಲ್ಲಿ ಹೆಚ್ಚಾದ ಬಿಸಿಲಿನ ಧಗೆ,ಇನ್ನು ಮೂರು ತಿಂಗಳು ಹೀಟ್ ಸ್ಟ್ರೋಕ್…!

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ಧಗೆ ಹೆಚ್ಚಳವಾಗುತ್ತಿದ್ದು, ಇನ್ನೂ ಮೂರು ತಿಂಗಳು ತಾಪಮಾನ ಜನರನ್ನು ಕಂಗೆಡಿಸಲಿದೆ. ರಾಜ್ಯದಲ್ಲಿ ಈಗಾಗಲೇ ಆರಂಭಗೊಂಡಿರುವ ಬೇಸಿಗೆಯು ಮೇ ಅಂತ್ಯದವರೆಗೂ ಇರಲಿದೆ.

ಈ ವರ್ಷ ರಾಜ್ಯದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಾಗಲಿದೆ. ವಿಶೇಷವಾಗಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಗದಗ, ಬೆಳಗಾವಿ, ಬಾಗಲಕೋಟೆಯಲ್ಲಿ ತಾಪಮಾನವು ವಾಡಿಕೆಗಿಂತ 2 ರಿಂದ 3 ಡಿ.ಸೆ ಅಧಿಕವಾಗಿರಲಿದೆ. ಗರಿಷ್ಠ ತಾಪಮಾನ 42 ಡಿ.ಸೆ ನಿಂದ 45 ಡಿ.ಸೆ ಗೆ ಏರಿಕೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ವಾಡಿಕೆಯಷ್ಟು ಅಥವಾ ವಾಡಿಕೆಗಿಂತ ಒಂದೆರೆಡು ಡಿ.ಸೆ ಅಧಿಕ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯೆಲ್ಲೋ ಅಲರ್ಟ್:
ಮಾರ್ಚ್ ನಿಂದ ಮೇ ವರೆಗೆ ರಾಜ್ಯದ ಕೆಲವೆಡೆ 2 ರಿಂದ 14 ದಿನಗಳು ಬಿಸಿ ಗಾಳಿ ದಿನಗಳಾಗಿರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ವಾಡಿಕೆಗಿಂತ 1 ಡಿ.ಸೆ ತಾಪಮಾನ ಹೆಚ್ಚಾದರೂ ಅದನ್ನು ವಾಡಿಕೆಗಿಂತ ಅಧಿಕ ತಾಪಮಾನವೆಂದು ಕರೆಯಲಾಗುತ್ತದೆ. ಒಂದು ಪ್ರದೇಶದಲ್ಲಿ ಸರಾಸರಿ ತಾಪಮಾನ 40 ಡಿ.ಸೆ.ಗಿಂತ ಅಧಿಕ ದಾಖಲಾಗಿದ್ದರೆ ಬಿಸಿ ಗಾಳಿ ಹವಾಮಾನ ಎಂದು ಪರಿಗಣಿಸಲಾಗುತ್ತದೆ. ಮೂರು ದಿನಗಳ ಕಾಲ ವಾಡಿಕೆಗಿಂತ ಸರಾಸರಿ 5 ಡಿ.ಸೆ. ತಾಪಮಾನ ಅಧಿಕವಾಗಿದ್ದರೆ, ಬಿಸಿ ಗಾಳಿ ಹವಾಮಾನ ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 42 ರಿಂದ 45 ಡಿ.ಸೆ ದಾಖಲಾಗುವ ಸಾಧ್ಯತೆ ಇರುವುದರಿಂದ ಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ತಾಪಮಾನ ಹೆಚ್ಚಳ:

ಉತ್ತರ ಭಾರತದಲ್ಲಿ ತಾಪಮಾನ ಜಾಸ್ತಿಯಾಗಿದ್ದು, ಅದರ ಪ್ರಭಾವ ರಾಜ್ಯದ ಉತ್ತರದ ಜಿಲ್ಲೆಗಳ ಮೇಲೆ ಬೀರಲಿದೆ. ಅಲ್ಲದೆ ಲಾ ನೀನಾ ಕಂಡೀಷನ್ ದುರ್ಬಲವಾಗುತ್ತಿದ್ದು, ನ್ಯೂಟ್ರಲ್ ಪೇಸ್‌ನಲ್ಲಿ ಮುಂದುವರಿಯುತ್ತಿದೆ ಇದು ಕೂಡ ತಾಪಮಾನಕ್ಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ.

ಕರಾವಳಿಗರೇ ಅಲರ್ಟ್:

ಕರಾವಳಿ ಜಿಲ್ಲೆಗಳಲ್ಲಿಇನ್ನೂ ಎರಡು ದಿನ ಬಿಸಿ ಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಾ.೨ ಮತ್ತು ೩ ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಅಧಿಕವಾಗಿರಲಿದ್ದು, ಬಿಸಿ ಗಾಳಿ ಬೀಸಲಿದೆ.

ಮಾ.1 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಗರಿಷ್ಠ ತಾಪಮಾನ 40.1 ಡಿ.ಸೆ,ಉಪ್ಪಿನಂಗಡಿಯಲ್ಲಿ 39.1 ಡಿ.ಸೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 399 ಡಿ.ಸೆ,
ಹೊನ್ನಾವರದಲ್ಲಿ 39.8 ಡಿ.ಸೆ ಗರಿಷ್ಠ ತಾಪಮಾನ ದಾಖಲಾಗಿದೆ. ರಾಜ್ಯದಲ್ಲಿ ಏಪ್ರಿಲ್ – ಮೇ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಅಧಿಕವಾಗಿದೆ. ಕೆಲವು ಬಾರಿ ಮಳೆ ಕೂಡ ಬರಲಿದ್ದು, ಇದು ತಾಪಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಫೆಬ್ರವರಿಯಲ್ಲಿ ಬಿಸಿ ಗಾಳಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಆದರೆ ಈ ವರ್ಷ ರಾಜ್ಯದ ಕರಾವಳಿಯಲ್ಲಿ ಬಿಸಿ ಗಾಳಿ ಕಾಣಿಸಿಕೊಂಡಿದೆ. ಇದು ಬಿಸಿಲಿನ ತೀವ್ರತೆಯನ್ನು ತೋರಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular