ಬೆಂಗಳೂರು ; ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಡೆಯಲು ರಾಜ್ಯಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಥಾವರ್‌ಚಂದ್ ಗೆಲ್ಹೋಟ್ ಅಂಕಿತ ಹಾಕದೆ ವಾಪಸ್ ಕಳುಹಿಸಿ ಕೆಲ ಸ್ಪಷ್ಟನೆಗಳನ್ನು ಕೇಳಿದ್ದಾರೆ.
ಮೈಕ್ರೋಫೈನಾನ್ಸ್ ಸಂಸ್ಥೆಗಳ ಹಾವಳಿಗೆ ಅಂಕುಶ ಹಾಕಲು ರಾಜ್ಯಸರ್ಕಾರ ಹೊಸ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ರೂಪಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ಈ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರು ಸುಗ್ರೀವಾಜ್ಞೆಯಲ್ಲಿ ಸಾಲಗಾರರ ಹಿತವನ್ನು ಮಾತ್ರ ಗಮನಿಸಲಾಗಿದೆ. ಆದರೆ, ಸಾಲ ಕೊಟ್ಟವರ ಹಿತರಕ್ಷಣೆ ಅಂಶಗಳಿಲ್ಲ. ಇದು ಸಹಜ ನ್ಯಾಯಕ್ಕೆ ವಿರುದ್ಧ ಎಂದು ಹೇಳಿ ಕೆಲ ಸ್ಪಷ್ಟನೆ ಬಯಸಿ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದಾರೆ.
ಈಗಾಗಲೇ ಲೇವಾದೇವಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಯ್ದೆಗಳಿದ್ದು, ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಮತ್ತೊAದು ಹೊಸ ಕಾಯ್ದೆಯ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನೂ ರಾಜ್ಯಪಾಲರು ಕೇಳಿದ್ದಾರೆ ಎಂದು ಹೇಳಲಾಗಿದೆ. ಈ ಸುಗ್ರೀವಾಜ್ಞೆಯಲ್ಲಿ ಸಾಲಗಾರರಿಗೆ ಕಿರುಕುಳ ಕೊಡುವವರ ವಿರುದ್ಧ ಜೈಲು ಶಿಕ್ಞೆ ವಿಧಿಸುವ ಅಂಶವಿದ್ದು, 10 ವರ್ಷ ಜೈಲು ಶಿಕ್ಷೆ ವಿಧಿಸುವುದರ ಬಗ್ಗೆಯೂ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಈ ಸುಗ್ರೀವಾಜ್ಞೆ ಜಾರಿಯಿಂದ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರಿಗೂ ತೊಂದರೆಯಾಗುತ್ತದೆ. ಸಾಲಗಾರರು, ಸಾಲ ನೀಡುವವರೂ ಎಲ್ಲರ ಹಿತರಕ್ಷೆಣೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ಜಾರಿ ಅಗತ್ಯವಿದೆ ಎಂದೂ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳುಹಿಸಿರುವ ಟಿಪ್ಪಣಿಯಲ್ಲಿ ನಮೂದಿಸಿದ್ದಾರೆ ಎಂದು ಹೇಳಲಾಗಿದೆ .