ಬೆಂಗಳೂರು : ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಬೇಕೆಂದು ರಾಜ್ಯ ಬಿಜೆಪಿ ನಿಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ನಗರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ನಿಯೋಗ, ಅಸ್ಸಾಂನಲ್ಲಿ ನಿನ್ನೆ ಚುನಾವಣಾ ಭಾಷಣ ಮಾಡುವಾಗ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮಾಜ್ ಮಾಡುವಾಗ ವಿಷಸರ್ಪ ಬಂದರೆ ನೀವು ನಮಾಜನ್ನು ನಿಲ್ಲಿಸಿ ಅದನ್ನು ಕೊಲ್ಲಿ; ನಮಾಜ್ ಮಾಡುವಾಗ ಬಿಜೆಪಿ, ಆರೆಸ್ಸೆಸ್ನವರು ಬಂದರೆ ನಮಾಜನ್ನು ನಿಲ್ಲಿಸಿ ಅವರನ್ನು ಕೊಲ್ಲಿ; ಇದು ಕುರಾನ್ನಲ್ಲಿ ಉಲ್ಲೇಖ ಆಗಿದೆ ಎಂದಿದ್ದಾರೆ. ಇದು ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಎಸ್. ಮುನಿರಾಜು, ಖರ್ಗೆ ಅವರ ಹೇಳಿಕೆಯಿಂದ ಸಮಾಜದಲ್ಲಿ ಕೋಮುಗಲಭೆ ಹರಡುವ ಸಂದರ್ಭಗಳು ಬರಬಹುದು. ದೇಶದ್ರೋಹಿಗಳು, ಮೂಲಭೂತವಾದಿಗಳಿಗೆ ಬೆಂಬಲ ಸೂಚಿಸುವ ಮಾತುಗಳಿವು. ಇದರ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ನಮ್ಮ ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯೋಗದ ಅಧಿಕಾರಿ ಹೇಳಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆ ನೀಡಿರುವ ಖರ್ಗೆಯವರನ್ನು ಬಂಧಿಸಬೇಕು ಎಂದು ಹೇಳಿದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಮಲ್ಲಿಕಾರ್ಜುನ್ ಖರ್ಗೆಯವರು ಸಂವಿಧಾನ ವಿರೋಧಿ ಮಾತನ್ನಾಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಚುನಾವಣೆ ಸಂದರ್ಭದಲ್ಲಿ ಕೋಮು ಗಲಭೆ ಉಂಟಾಗುವ ಆತಂಕ ಎದುರಾಗಿದೆ ಎಂದು ಹೇಳಿದರು.ನಿಯೋಗದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್.ಹರೀಶ್, ರಾಜ್ಯ ವಕ್ತಾರ ಎಸ್.ಪ್ರಕಾಶ್ ಮತ್ತಿತರರಿದ್ದರು.


