ಬೆಂಗಳೂರು : ಈ ರಾಜ್ಯಸರಕಾರ ಅಧಿಕಾರಕ್ಕೆ ಬರಲು ಜನರಿಗೆ ನೀಡಿದ ಭಾಗ್ಯಗಳಿಗೆ ಹಣ ಹೊಂದಿಸಲು ಕಸರತ್ತು ನಡೆಸುತ್ತಿರುವುದು ಮತ್ತೊಮ್ಮೆ ಮನದಟ್ಟಾಗಿದೆ ,ಸರಕಾರ ಬಂದ ನಂತರ ರಾಜ್ಯದಲ್ಲಿ ಮದ್ಯದ ಬೆಲೆ ಜಾಸ್ತಿಮಾಡಿದಲ್ಲದೆ ಮತ್ತೊಮ್ಮೆ ಬಿಯರ್ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ .
ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಮತ್ತೊಮ್ಮೆ ಹೆಚ್ಚಿಸಲು ಪ್ರಸ್ತಾಪಿಸಿರುವುದಾಗಿ ವರದಿಯಾಗಿದೆ. ಒಂದು ವೇಳೆ ಇದು ನಿಜವಾದಲ್ಲಿ ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10 ರೂ. ವರೆಗೆ ದರ ಹೆಚ್ಚಾಗಲಿದೆ. ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳು) ನಿಯಮಗಳು, 1968’ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆ ರೂಪಿಸಲಾಗಿದ್ದು, ಇದರಲ್ಲಿ ದರ ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ. ದರ ಹೆಚ್ಚಳಕ್ಕೆ ಅವಕಾಶ ನೀಡುವ ಹೊಸ ನಿಯಮಗಳು ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕಾಗಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.ಬಿಯರ್ ಮಾರಾಟದಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಕಂಡುಬಂದಿರುವುದರಿಂದ ಆ ಮೂಲದಿಂದ ಹೆಚ್ಚು ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸರ್ಕಾರವು ಸುಂಕವನ್ನು ಹೆಚ್ಚಿಸುವತ್ತ ಮನ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಒಂದು ವೇಳೆ ದರ ಹೆಚ್ಚಳ ಜಾರಿಗೆ ಬಂದಿದ್ದೇ ಆದಲ್ಲ, ಆರು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಮದ್ಯದ ಬೆಲೆಯಲ್ಲಿ ಮಾಡಿದ ಏರಿಕೆಯಾಗಲಿದೆ. ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ನಿರ್ಮಿತ ಮದ್ಯದ ಮೇಲೆ ಶೇ 20ರಷ್ಟು ಮತ್ತು ಬಿಯರ್ ಮೇಲೆ ಶೇ 175ರಿಂದ ಶೇ 185ಕ್ಕೆ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರು.ಕರಡು ಅಧಿಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ತಯಾರಿಸಲಾದ ಅಥವಾ ರಾಜ್ಯಕ್ಕೆ ಆಮದು ಮಾಡಿಕೊಳ್ಳುವ ಬಿಯರ್ ಬಾಟಲಿಯ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಶೇಕಡಾ 10 ರಷ್ಟು ಹೆಚ್ಚಿಸಲಾಗುತ್ತದೆ.
2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಅಬಕಾರಿಯಿಂದ 36,000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.


