ಬೆಂಗಳೂರು : ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷಾಂತರಿಗಳದ್ದೇ ಸದ್ದು ಜೋರಾಗಿದ್ದು ಇದೀಗ ಚುನಾವಣೆ ಹೊಸ್ತಿಲಲ್ಲಿ ಸಂಸದ ಸಂಗಣ್ಣ ಕರಡಿ ಅವರು ಲೋಕಸಭಾ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ರಾಜಿನಾಮೆ ನೀಡಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಹಿರಿಯ ಸಂಗಣ್ಣ ಕರಡಿ ಕಳೆದ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದರು ಆದರೆ ಈ ಬಾರಿ ಹೈ ಕಮಾಂಡ್ ಟಿಕೆಟ್ ನೀಡದ ಕಾರಣ ಬೇಸರಗೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಇಮೇಲ್ ಮೂಲಕ ಸಂಗಣ್ಣ ಕರಡಿ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ.ಈಗಾಗಲೇ ಕಾಂಗ್ರೆಸ್ ನಾಯಕರೊಂದಿಗೆ ಸಂಗಣ್ಣ ಕರಡಿ ಮಾತುಕತೆ ನಡೆಸಿದ್ದಾರೆ.
ಸಂಗಣ್ಣ ಕರಡಿ ಅವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದು ಬಳಿಕ ಮಾತನಾಡಿದ ಮಾಜಿ ಸಂಸದ ಸಂಗಣ್ಣ ಕರಡಿ ನಾನು ಕಾಂಗ್ರೆಸ್ ಸೇರಲು ಲಕ್ಷ್ಮಣ ಸವದಿ ಕಾರಣರು. ಅಂದು ಬಿಜೆಪಿ ಸೇರುವುದಕ್ಕೂ ಅವರೇ ಕಾರಣರಾಗಿದ್ದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ನನಗೆ ಗೊತ್ತಿರುವವರು. ಎರಡು ಜಿಲ್ಲೆಗಳ ಅಭಿವೃದ್ಧಿಗಾಗಿ ನಾನು ಪಕ್ಷ ಸೇರ್ಪಡೆ ಆಗುತ್ತಿದ್ದೇನೆ. ರಾಜಶೇಖರ ಹಿಟ್ನಾಲ್ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಹೊತ್ತಿದ್ದೇನೆ ಎಂದು ಹೇಳಿದರು.


