ಬೆಂಗಳೂರು : ಬಿಕ್ಲು ಶಿವಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ಹೈಕೋರ್ಟ್ನಲ್ಲಿ ಭಾಗಶಃ ಸಮಾಧಾನ ಸಿಕ್ಕಿದೆಯಾದರೂ, ಬಂಧನದ ಭೀತಿ ಮಾತ್ರ ಸುಧಾರಿಸಿಲ್ಲ. ಅವರ ವಿರುದ್ಧ ಹೇರಲಾಗಿದ್ದ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ ವಿಧಿಸಿದ್ದನ್ನು ರದ್ದುಪಡಿಸಿರುವ ನ್ಯಾಯಾಲಯ, ಎಫ್ಐಆರ್ ರದ್ದು ಪಡಿಸಲು ಮತ್ತು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಪ್ರಕರಣದಲ್ಲಿ ಕೋಕಾ ಕಾಯಿದೆ ಜಾರಿಗೊಳಿಸುವಾಗ ಸರಿಯಾದ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದ ಕಾರಣ, ಹೈಕೋರ್ಟ್ ಈ ಕಾಯಿದೆಯಡಿ ದಾಖಲಾಗಿದ್ದ ಅಂಶಗಳನ್ನು ವಜಾಗೊಳಿಸಿದೆ.
ಪ್ರಕರಣವು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ತನಿಖೆ ಪ್ರಗತಿಯಲ್ಲಿ ದೆ. ಈ ಹಂತದಲ್ಲಿ ಎಫ್ಐಆರ್ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಅರ್ಜಿದಾರರು ಕೋರಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದರಿಂದ ಈ ಹಿಂದೆ ಮಂಜೂರಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಕೂಡ ರದ್ದಾದಂತಾಗಿದೆ.


