ಬೆಂಗಳೂರು : ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಾಲ್ವರ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಬಂಧಿತ ಓರ್ವ ಸೇರಿ ತಲೆಮರೆಸಿಕೊಂಡಿರುವ ಮೂವರು ನಿಷೇಧಿತ ಪಿಎಫ್‌ಐ ಸಂಘಟನೆ ಆರೋಪಿಗಳಲ್ಲದೇ ನಾಲ್ವರ ವಿರುದ್ಧ ೨ನೇ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಅಬ್ದುಲ್ ನಾಸೀರ್, ನೌಷದ್, ಅಬ್ದುಲ್ ರೆಹಮಾನ್ ಹಾಗೂ ಕಳೆದ ಜನವರಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಅತೀಕ್ ಅಹಮದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಐಪಿಸಿ) ಹಾಗೂ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ವಿವಿಧ ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ.
ಚಾರ್ಜ್ಶೀಟ್‌ನಲ್ಲಿ ಏನಿದೆ?
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿತರ ಸಂಖ್ಯೆ ೨೭ಕ್ಕೆ ಏರಿಕೆಯಾಗಿದೆ. ಈ ಪೈಕಿ 21 ಮಂದಿ ಬAಧಿಸಿದ್ದರೆ, ಒಟ್ಟು ಆರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮತ್ತೋರ್ವ ಮೃತಪಟ್ಟಿದ್ದಾನೆ ಎಂದು ಎನ್‌ಐಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಪತ್ತೆಯಾಗಿರುವ ಅಬ್ದುಲ್ ನಾಸೀರ್, ನೌಷದ್ ಹಾಗೂ ರೆಹಮಾನ್ ಅವರು ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡಿನ ಈರೋಡ್ ಜಿಲ್ಲೆಗಳಲ್ಲಿ ಮುಖ್ಯ ಆರೋಪಿಗಳಿಗೆ ಆಶ್ರಯ ನೀಡಿದ್ದರು. ಅಲ್ಲದೆ, ತುಫೈಲ್ ಎಂಬ ಆರೋಪಿಗೆ ಬೆಂಗಳೂರಿನಲ್ಲಿ ಆಶ್ರಯ ಕೊಟ್ಟಿದ್ದರು ಎಂದು ಅಧಿಕಾರಿಗಳು ಚಾರ್ಜ್ ಶೀಟ್‌ನಲ್ಲಿ ತಿಳಿಸಿದ್ಧಾರೆ.
ಮಾರ್ಗದರ್ಶನ ನೀಡಿದ್ದ:
2022 ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಭೀಕರವಾಗಿ ಕೊಲೆ ಮಾಡಿದ್ದರು. ಈ ಸಂಬಂಧ ಆಗಸ್ಟ್ 4 ರಂದು ಎನ್‌ಐಎ ತನಿಖೆ ಆರಂಭಿಸಿತ್ತು. ಹತ್ಯೆ ಬಳಿಕ ಪರಾರಿಯಾಗಲು ಪ್ರಮುಖ ಆರೋಪಿ ಮುಸ್ತಾಫ ಪೈಚಾರ್‌ಗೆ ಬಂಧಿತರಾದ ಅತೀಕ್ ಹಾಗೂ ಸದ್ಯ ಮೃತನಾಗಿರುವ ಕಲಾಂದರ್ ಚೆನ್ನೈನಲ್ಲಿ 2022 ರಿಂದ 2023 ರ ವರೆಗೆ ಆಶ್ರಯ ಒದಗಿಸಿದ್ದರು. ಅಲ್ಲದೆ, ನಾಪತ್ತೆಯಾಗಿರುವ ಅಬ್ದುಲ್ ರೆಹಮಾನ್ ವಿದೇಶಕ್ಕೆ ಪರಾರಿಯಾಗಲು ಹಾಗೂ ರಿಯಾಜ್ ಎಂಬಾತ ಪೈಚಾರ್‌ಗೆ ಆಶ್ರಯ ಒದಗಿಸುವ ಬಗ್ಗೆ ಅತೀಕ್ ಹಾಗೂ ಕಲಾಂದರ್‌ಗೆ ಮಾರ್ಗದರ್ಶನ ನೀಡಿದ್ದ ಎಂದು ಚಾರ್ಜ್ ಶೀಟ್‌ನಲ್ಲಿ ಅಧಿಕಾರಿಗಳು ಉಲ್ಲೇಖಿಸಿದ್ದು, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ