ಬೆಂಗಳೂರು : ಮಾರುಕಟ್ಟೆಯಲ್ಲಿ ಕೆಂಪು ಚೆಲುವೆ ಟೊಮೆಟೊ ಬೆಲೆ ಪಾತಾಳಕ್ಕೆ ಇಳಿದಿದೆ. ಈ ಬಾರಿ ಉತ್ತಮ ಬೆಲೆ ಸಿಗುವ ಕನಸಿನಲ್ಲಿ ಹೆಚ್ಚಿನ ಟೊಮೆಟೊ ಬೆಳೆದ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಟೊಮೆಟೊ ಬೆಳೆದ ಅನ್ನದಾತರು ಮಾರುಕಟ್ಟೆಯಲ್ಲಿ ಸಿಗದೇ ಬೆಲೆ ಕುಸಿತ ಕಂಡು ಕಂಗಾಲಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಟೊಮೆಟೊ ಬೆಲೆ ಏರಿಕೆ ಕಂಡು ಮಾಯಕೊಂಡ ಭಾಗದ ರೈತರು ನೂರಾರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಆದರೆ ಟೊಮೆಟೊ ಬೆಲೆ ಏಕಾಏಕಿ ಕುಸಿದಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿ ಟೊಮೆಟೊ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಮಾಯಕೊಂಡ ಸುತ್ತಮುತ್ತಲಿನ ಬಹುತೇಕ ಗ್ರಾಮಗಳ ಜಮೀನುಗಳಲ್ಲಿ ರೈತರು ಬೆಳೆದ ಟೊಮೆಟೊಗಳು
ರಾಷ್ಟ್ರ ಮಟ್ಟದಲ್ಲಿ ರಫ್ತಾಗುವ ಹೆಗ್ಗಳಿಕೆಗೆ ಪಾತ್ರವಾಗಿವೆ. ಬೆಲೆ ಹೆಚ್ಚಿರುವುದನ್ನು ಮನಗಂಡ ರೈತರು ತಮ್ಮ ಹೊಲಗಳಲ್ಲಿ ಹೆಚ್ಚು ಟೊಮೆಟೊ ನಾಟಿ ಮಾಡಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ, ಕೊಡಗಾನೂರು, ಸುಲ್ತಾನಿಪುರ, ನೇರ್ಲಿಗೆ, ಹೊನ್ನನಾಯಕನಹಳ್ಳಿ ಮೊದಲಾದ ಗ್ರಾಮದ ಜಮೀನುಗಳಲ್ಲಿ 100 – 200ಎಕರೆಯಲ್ಲಿ ರೈತರು ಟೊಮೆಟೊ ಬೆಳೆದಿದ್ದಾರೆ.
ಟೊಮೆಟೊ ಬೆಲೆ ಕುಸಿತ ಕಂಡ ನಂತರ ಮಾರುಕಟ್ಟೆಗೆ ಕೊಂಡೊಯ್ಯಲು ಹಿಂದೇಟು ಹಾಕುತ್ತಿರುವ ರೈತರು ಟೊಮೆಟೊ ಬೆಳೆಯಲು ಎಕರೆಗೆ 80-90 ಸಾವಿರ ಖರ್ಚು ಮಾಡಿದ್ದಾರೆ. ಈಗ ಬೆಲೆ ಇಲ್ಲದ ಕಾರಣ ರೈತರು ಸಾಲದ ಸುಳಿಯಲ್ಲಿ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ.
ಕೊಡಗಾನೂರು ಗ್ರಾಮದ ರೈತ ಮಹಿಳೆ ರೇಣುಕಮ್ಮ ಹಾಗೂ ರೈತ ಮಂಜಣ್ಣ ತಮ್ಮ ಜಮೀನಿನಲ್ಲಿ ಟೊಮೆಟೊ ಹಾಕಿ ಕೈ ಸುಟ್ಟುಕೊಂಡಿದ್ದಾರೆ. ರೈತ ಮಂಜಣ್ಣ, ಒಂದು ಬಾಕ್ಸ್ ಟೊಮೆಟೊ 150- 200 ರೂಪಾಯಿ ಬೆಲೆ ಇದೆ ಎಂದು ರೈತರು 200 ಎಕರೆಯಲ್ಲಿ ಟೊಮೆಟೊ ಹಾಕಿದ್ದಾರೆ. ಈಗ ಎಕರೆಗೆ 1 ಲಕ್ಷ ಖರ್ಚು ಮಾಡಿದ್ದು, ಬೆಲೆ ಕಡಿಮೆ ಇರುವುದರಿಂದ ರೈತನಿಗೆ ಏನೂ ಇಲ್ಲದಂತಾಗಿದೆ. ಸರಕಾರದಿಂದ ಬಂದ ಅನುದಾನವನ್ನು ನಿಲ್ಲಿಸಿದ್ದಾರೆ.
ಸರ್ಕಾರ ನೀಡುವ ರಸಗೊಬ್ಬರ ಮತ್ತು ಬೀಜವನ್ನೂ ನಿಲ್ಲಿಸಿದ್ದಾರೆ. ಹಾಕಿದ ಬಂಡವಾಳವನ್ನು ತೆಗೆದುಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇಂದಿನ ಬೆಲೆ ಮತ್ತು ಹಳೆಯ ಬೆಲೆಯ ನಡುವೆ ಭಾರಿ ವ್ಯತ್ಯಾಸವಿದೆ. ಬೆಲೆ ಹೆಚ್ಚಾದಾಗ ರೈತರು ಹೆಚ್ಚು ಟೊಮೆಟೊ ಹಾಕಿದ್ದು, ಫಸಲು ಬರುವ ವೇಳೆಗೆ ಬೆಲೆ ಕುಸಿದಿತ್ತು ರೈತ ಮಹಿಳೆ ರೇಣುಕಮ್ಮ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ . ಎರಡು ಎಕರೆ ಟೊಮೆಟೊ ನಾಟಿ ಮಾಡುವಾಗ ಬಾಕ್ಸ್ 500-600 ರೂ., ಈಗ ಒಂದು ಬಾಕ್ಸ್ 50೦-60,೦೦೦ ರೂಬಂದ ಹಣದಿಂದ ನಾವು ದಲ್ಲಾಳಿಗಳಿಗೆ, ಕೂಲಿಗಳಿಗೆ ಮತ್ತು ಟೊಮೆಟೊಗಳನ್ನು ಮಾರುಕಟ್ಟೆಗೆ ಸಾಗಿಸಲು ಪಾವತಿಸಿದ್ದೇವೆ. ನಾವು ಯಾವುದೇ ಲಾಭವನ್ನು ಗಳಿಸುತ್ತಿಲ್ಲ, ನಾವು ಇಲ್ಲಿಯವರೆಗೆ ಒಟ್ಟು 150 ಬಾಕ್ಸ್ ಟೊಮೆಟೊಗಳನ್ನು ಮಾರಾಟ ಮಾಡಿದ್ದೇವೆ. ಆದರೆ ಖರ್ಚು ಮಾಡಿದ ಹಣ ಕೈ ಸೇರಿಲ್ಲ. ಸಾಲ ಸೋಲ ಮಾಡಿ ಟೊಮೆಟೊ ಬೆಳೆದಿದ್ದೇವೆ. ಪರಿಹಾರದ ಅಗತ್ಯವಿದೆ ಸರಕಾರವೇ ರೈತರತ್ತ ಗಮನಹರಿಸಿ ಎಂದು ಮನವಿ ಮಾಡಿದ್ದಾರೆ.