Friday, July 24, 2026
Homeರಾಜಕೀಯಬೆಂಗಳೂರು : ಪರಿಷತ್‌ನಲ್ಲಿ ಹಿಂದು ಧಾರ್ಮಿಕ ವಿಧೇಯಕ ತಿರಸ್ಕೃತ; ರಾಜ್ಯ ಸರ್ಕಾರಕ್ಕೆ ಮುಖಭಂಗ,ಜೈ ಶ್ರೀರಾಮ್ ಎಂದು...

ಬೆಂಗಳೂರು : ಪರಿಷತ್‌ನಲ್ಲಿ ಹಿಂದು ಧಾರ್ಮಿಕ ವಿಧೇಯಕ ತಿರಸ್ಕೃತ; ರಾಜ್ಯ ಸರ್ಕಾರಕ್ಕೆ ಮುಖಭಂಗ,ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಬಿಜೆಪಿ.

ಬೆಂಗಳೂರು : ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಹಿಂದೂ ಧಾರ್ಮಿಕ ವಿಧೇಯಕ ಪರಿಷತ್​ನಲ್ಲಿ ತಿರಸ್ಕೃತಗೊಂಡಿದೆ. ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಅವರು ಮೊದಲು ಪರಿಷತ್​ನಲ್ಲಿ ವಿಧೇಯಕ ಮಂಡಿಸಿದರು. ದೇಗುಲಗಳ ನಿವ್ವಳ ಆದಾಯದಲ್ಲಿ ಶೇ.10 ನಿಧಿ ಸಂಗ್ರಹ ಮಾಡುವುದು ಸರಿಯಲ್ಲ. ಈ ನಿರ್ಧಾರವನ್ನು ಕೈಬಿಡಬೇಕು ಸದನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಈ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಪರ-ವಿರೋಧದ ಚರ್ಚೆ ಆಗಿದ್ದು, ಅಂತಿಮವಾಗಿ ಉಪ ಸಭಾಪತಿ ಪ್ರಾಣೇಶ್ ಅವರು ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದರು.

ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, 2003ರಿಂದ ವಿಧೇಯಕ ಜಾರಿಯಲ್ಲಿದೆ. 2003ರ ಮೇ 1 ರಿಂದ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಈಗಿರುವ ನಿಯಮದಂತೆ ಸರ್ಕಾರಕ್ಕೆ 8 ಕೋಟಿ ರೂ. ಸಲ್ಲಿಕೆ ಆಗುತ್ತಿದೆ ಎಂದರು. ಈಗಿನ‌ ಸಾಮಾನ್ಯ ಸಂಗ್ರಹಣ ನಿಧಿಯಿಂದ ಧಾರ್ಮಿಕ ಕೆಲಸ ಮಾಡಲಾಗಲ್ಲ. ಹೊಸ ನಿಯಮದಿಂದ 60 ಕೋಟಿ ರೂಪಾಯಿ ಹಣ ಸಂಗ್ರಹ ಆಗುತ್ತದೆ. ಸಿ ದರ್ಜೆಯ ದೇಗುಲಗಳನ್ನು ನಿರ್ವಹಿಸಲು ಇದರಿಂದ ಸಾಧ್ಯವಾಗುತ್ತದೆ ಎಂದರು.

ಹುಂಡಿ ಹಣಕ್ಕೆ ಸರ್ಕಾರ ಕೈ ಹಾಕಿದೆ ಎಂಬ ವಿವಾದಕ್ಕೆ ಕಾರಣವಾಗಿದ್ದ ಹಿಂದೂ ಧಾರ್ಮಿಕ ದೇವಸ್ಥಾನಗಳ ತಿದ್ದುಪಡಿ ಬಿಲ್ ತೀವ್ರ ಕುತೂಹಲ ಮೂಡಿಸಿತು. ಚರ್ಚೆ ವೇಳೆ ಬಿಜೆಪಿ, ಜೆಡಿಎಸ್‌ ಸದಸ್ಯರಿಂದ ವಿಧೇಯಕಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ನಂತರ ವಿಧೇಯಕವನ್ನು ಧ್ವನಿಮತಕ್ಕೆ ಹಾಕಲು ಉಪ ಸಭಾಪತಿ ಸೂಚಿಸಿದರು.ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದ್ದು, ವಿಧೇಯಕ ಪರ 7 ಮತ, ವಿಧೇಯಕದ ವಿರುದ್ಧ 18 ಮತ ಚಲಾವಣೆಯಾಗಿವೆ. ಆದರೆ, ಬಿಲ್ ವಿರುದ್ಧ ಬಿಜೆಪಿ-ಜೆಡಿಎಸ್ ಸದಸ್ಯರು ಮತ ಹಾಕಿದ್ದರಿಂದ ಬಿಲ್‌ ತಿರಸ್ಕಾರಗೊಂಡಿತು. ಕೊನೆಗೆ ವಿಧೇಯಕ ತಿರಸ್ಕಾರವಾಗಿದ್ದರಿಂದ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ.ಇದರ ಬೆನ್ನಲ್ಲೇ ಬಿಜೆಪಿ ಸದಸ್ಯರು ಜೈ ಶ್ರೀರಾಂ ಘೋಷಣೆ ಕೂಗಿದರು. ಇನ್ನು ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಸದಸ್ಯರು ಭಾರತ್​ ಮಾತಾಕಿ ಜೈ, ಜೈ ಭೀಮ್​ ಎಂದು ಘೋಷಣೆ ಕೂಗಿದ್ದಾರೆ.

ಕ್ಷಣ ಕ್ಷಣಕ್ಕೂ ಜಟಾಪಟಿ ಉಂಟಾಗಿದ್ದರಿಂದ ವಿರೋಧ ಪಕ್ಷಗಳ ಒತ್ತಡಕ್ಕೆ ಕೊಂಚ ಮೆತ್ತಗಾದ ರಾಮಲಿಂಗಾರೆಡ್ಡಿ ಅವರು, ಬಿಲ್ ಅನ್ನು ಮತ್ತೊಮ್ಮೆ ಸೋಮವಾರ ಮಂಡಿಸುತ್ತೇನೆ ಎಂದು ಹೇಳಿದರು. ಇದಕ್ಕೆ ಉಪ ಸಭಾಪತಿ ಪ್ರಾಣೇಶ್ ಆಕ್ಷೇಪ ವ್ಯಕ್ತಪಡಿಸಿ, ಒಮ್ಮೆ ಪರ್ಯಾಲೋಚನೆಗೆ ತೆಗೆದುಕೊಂಡ ಬಿಲ್ ಮುಂದೂಡಲು ಸಾಧ್ಯವಿಲ್ಲ ಎಂದರು. ಬೇಕಿದ್ದರೆ ಸೋಮವಾರವೇ ಮಂಡನೆ ಮಾಡಿ ಎಂದು ಬಿಜೆಪಿ ಸದಸ್ಯರೂ ಹೇಳಿದರು. ಆದರೆ, ನಂತರ ನಡೆದ ಧ್ವನಿ ಮತದಲ್ಲಿ ವಿಧೇಯಕ ತಿರಸ್ಕಾರಗೊಂಡಿತು.


RELATED ARTICLES

LEAVE A REPLY

Please enter your comment!
Please enter your name here

Most Popular