ಬೆಂಗಳೂರು : ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಕುರಿತು ಹಲವು ಆಯಾಮ ಗಳಲ್ಲಿ ಚರ್ಚೆ ನಡೆದಿದೆ. ಸಂಪುಟ ಪುನಾರಚನೆ ಖಾತ್ರಿ ಎನ್ನುವ ಸುದ್ದಿ ಖಚಿತವಾಗುತ್ತಲೇ, ನಾಯಕತ್ವ ಬದಲಾವಣೆ ವಿಚಾರವೂ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಹಾಗಾದಲ್ಲಿ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಲಿತ ಮುಖ್ಯಮಂತ್ರಿಯೊಬ್ಬರನ್ನು ಪ್ರತಿಷ್ಠಾಪಿಸುವ ಸಂಭಾವ್ಯ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನಕ್ಕೆ ಪುಷ್ಠಿ ಕೊಡುವ ವಿದ್ಯಮಾನಗಳು ಘಟಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಕೂಡಾ ಇಂತಹದ್ದೇ ಪ್ರಸ್ತಾಪದ ಪೂರಕ ನಡೆಗೆ ಸಾಥ್ ಕೊಡಲಿದ್ದಾರೆಂದೇ ಹೇಳಲಾಗುತ್ತಿದೆ.
ಸರ್ಕಾರಕ್ಕೆ ಎರಡೂವರೆ ವರ್ಷವಾಗುವ ನವೆಂಬರ್ ಹೊತ್ತಿಗೆ ಮಹತ್ವದ ಬೆಳವಣಿಗೆಗಳಾಗಲಿವೆ ಎನ್ನುವುದು ಬಹುಚರ್ಚಿತ ಸಂಗತಿಯಾಗಿದೆ. ಹಾಲಿ ಸಂಪುಟದಿAದ ಅರ್ಧದಷ್ಟು ಮಂತ್ರಿಗಳು ಗೇಟ್‌ಪಾಸ್ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಹೊಸದಾಗಿ ಕ್ಯಾಬಿನೆಟ್ ಸೇರಲು ಬಹುದೊಡ್ಡ ಆಕಾಂಕ್ಷಿಗಳ ಪಟ್ಟಿಯಿದ್ದು ಲಾಬಿಯೂ ಶುರುವಾಗಿದೆ
ಗುರುವಾರ ರಾತ್ರಿ ದಲಿತ ಸಮುದಾಯದ ಹಿರಿಯ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಡಾ.ಹೆಚ್.ಸಿ.ಮಹದೇವಪ್ಪ ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ವೇಳೆ ನವೆಂಬರ್‌ನಲ್ಲಿ ಘಟಿಸಬಹುದಾದ ಸಂಭಾವ್ಯ ಅಧಿಕಾರ ಸ್ಥಿತ್ಯಂತರಗಳ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ ನಡೆದಿರುವ ಮೂರ್ನಾಲ್ಕು ಸಮೀಕ್ಷೆಗಳಲ್ಲಿ ಪರಿಶಿಷ್ಟಜಾತಿ ಜನಸಂಖ್ಯೆ ಅಗ್ರಸ್ಥಾನಿ ಎನ್ನುವುದು ಖಚಿತಪಟ್ಟಿದೆ. ನಾಯಕರ ಮಾತಿನ ನಡುವೆ ಇದೂ ಕೂಡ ಪ್ರಸ್ತಾಪವಾಗಿದೆ. ಎಸ್ಸಿ ಸಂಘಟನೆಗಳ ಮೂಲಕವೇ ಸಿಎಂ ಹುದ್ದೆ ದಲಿತ ಸಮುದಾಯಕ್ಕೆ ಸಿಗುವಂತೆ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರಗಾರಿಕೆ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಸಿಗಬೇಕೆಂಬುದು ದಶಕಗಳ ಬೇಡಿಕೆ. ಇದೀಗ ನಿಚ್ಚಳ ಬಹುಮತದ ಸರ್ಕಾರದಲ್ಲಿ ಇದನ್ನು ಸಾಧ್ಯವಾಗಿಸುವತ್ತ ಗಂಭೀರ ಪ್ರಯತ್ನ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯ ರಾಜಕಾರಣಕ್ಕೆ ಸೆಳೆದಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯಬಹುದೆಂಬ ಲೆಕ್ಕಾಚಾರವಿದೆ. ಏನೇ ವಿದ್ಯಮಾನಗಳು ನಡೆದರೂ ನವೆಂಬರ್ ಮೂರನೇ ವಾರದಲ್ಲಿ ಮಾತ್ರ. ಹಾಗಾಗಿ ಅಷ್ಟರಲ್ಲಿ ಹೆಚ್ಚುವರಿ ೩ ಡಿಸಿಎಂ ಹಾಗೂ ದಲಿತ ಸಿಎಂ ಪ್ರಸ್ತಾವನೆಗೂ ನಿರ್ಣಾಯಕ ತಿರುವು ಸಿಗಲಿದೆ ಎನ್ನುವುದು ಸದ್ಯದ ರಾಜಕೀಯ ತಂತ್ರಗಾರಿಕೆಯ ಭಾಗ ಎನ್ನುವುದು ಸುಸ್ಪಷ್ಟ. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಘಟಿಸಬಹುದು ಎನ್ನುವ ಮಾತಿಗೂ ಇದು ಪೂರಕವಾಗಲಿದೆ.
ನವೆಂಬರ್ ಕ್ರಾಂತಿ ಕೇವಲ ಸಂಪುಟ ಸರ್ಜರಿ ಮಾತ್ರವಲ್ಲದೆ ನಾಯಕತ್ವ ಬದಲಾವಣೆಗೂ ವಿಸ್ತರಿಸಲ್ಪಡಲಿದೆಯೇ? ಎನ್ನುವ ಚರ್ಚೆಗಳು ಕೈ ಪಾಳೆಯದಲ್ಲಿ ನಡೆದಿದೆ. ಒಂದು ವೇಳೆ ಸಿಎಂ ಬದಲಾವಣೆಗೆ ಹೈಕಮಾಂಡ್ ಮುಂದಾದಲ್ಲಿ ರೂಪಿಸ ಬಹುದಾದ ಕಾರ್ಯತಂತ್ರದ ಬಗ್ಗೆಯೂ ಗಂಭೀರ ಮಾತುಕತೆ ನಡೆಯುತ್ತಿದೆ.