ಬೆಂಗಳೂರು ; ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಗದಗ ಜಿಲ್ಲೆ ಶಿರಹಟ್ಟಿ ಹಾಗೂ ಬಾಡೆಹೊಸೂರು ಭಾವೈಕ್ಯತಾ ಸಂಸ್ಥಾನ ಮಠದ ಅಧಿಪತಿಗಳಾದ ಜಗದ್ಗುರು ಪಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರಕಟಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಭವನದಲ್ಲಿಂದು ವಿವಿಧ ಮಠಾಧೀಶರುಗಳ ಜತೆ ಚಿಂತನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದ್ಗುರು ಪಕೀರ ದಿಂಗಾಲೇಶ್ವರ ಸ್ವಾಮೀಜಿ, ಧಾರವಾಡ ಮತ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಾಡಿನ ಬಹುಸಂಖ್ಯಾತ ಮಠಾಧಿಪತಿಗಳು, ಭಕ್ತರು, ಸಾಹಿತಿಗಳು, ಕಲಾವಿದರು, ರೈತರು, ವ್ಯಾಪಾರಿಗಳು, ನೌಕರರು ಹಾಗೂ ಸರ್ವ ಸಮಾಜದ ಮುಖಂಡರು ಬಯಸಿದ್ದು, ಇವರೆಲ್ಲರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನ ಕೈಗೊಂಡಿರುವುದಾಗಿ ಹೇಳಿದರು.
ಇಂದು ನಡೆದ ವಿವಿಧ ಮಠಾಧೀಶರ ಚಿಂತನಾ ಸಭೆಯಲ್ಲಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಲಿಂಗಾಯತ ಸಮುದಾಯವನ್ನು ತುಳಿಯುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ದೂರಿದರು. ಸಂಸದರಾಗಿ, ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಷಿ ಅವರು ಅಭಿವೃದ್ಧಿಯಲ್ಲಿ ಝಿರೋ ಆಗಿ ವಿವಿಧ ಸಮಾಜದ ನಾಯಕರುಗಳನ್ನು ತುಳಿಯುವ ಕಾರ್ಯದಲ್ಲಿ ಜೋಷಿ ಅವರು ಹೀರೋ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಜನ ಮಾತನಾಡುತ್ತಿದ್ದಾರೆ. ಹಾಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ವಾರ್ಥಿ ರಾಜಕಾರಣಿಗಳ ದುರಾಡಳಿತದ ವಿರುದ್ದ ಸ್ವಾಭಿಮಾನಿಗಳು
ಸಾರಿದ ಧರ್ಮ ಯುದ್ಧ ಇದಾಗಿದೆ. ರಾಜಕೀಯ ಪ್ರಜ್ಞೆಯನ್ನು ಮೂಡಿಸಲಿಕ್ಕಾಗಿ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಧರ್ಮದಲ್ಲಿ ರಾಜಕೀಯ ಇರಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನ ಬಯಸಿದ್ದಾರೆ. ನೋಂದ ಸಮಾಜಗಳು, ನಾಯಕರುಗಳು ನಮ್ಮ ಮುಂದೆ ಬಂದು ನೋವು ತೋಡಿಕೊಂಡ ಕಾರಣ ಚುನಾವಣಾ ಹೋರಾಟಕ್ಕೆ ಇಳಿದಿದ್ದೇನೆ ಎಂದು ಅವರು ಹೇಳಿದರು.
ಕೇಂದ್ರ ಓಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತರನ್ನು ಸಮಗ್ರವಾಗಿ ಸೇರಿಸದೆ ಕೆಲವರನ್ನು ಸೇರಿಸಿ ಕೆಲವರನ್ನು ಬಿಟ್ಟಿರುವುದು ಸಮಾಜದ ಅವನತಿಗೆ ಕಾರಣವಾಗಿದೆ. ವೀರಶೈವ ಲಿಂಗಾಯತರನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ನಿರ್ಲಕ್ಷ್ಯೆ ಮಾಡಿವೆ. ಇವರಿಗೆ ವೀರಶೈವ ಲಿಂಗಾಯತ ಮತ್ತು ಇತರ ಸಮಾಜಗಳ ಮತ ಬೇಕು. ಆದರೆ ಅಧಿಕಾರ ಮಾತ್ರ ಕೊಡಲ್ಲ. ಕುರುಬರು, ರೆಡ್ಡಿ, ಜಂಗಮ ಹೀಗೆ ಬಹಳಷ್ಟು ಸಮಾಜಗಳನ್ನು ಎರಡೂ ಪಕ್ಷಗಳು ನಿರ್ಲಕ್ಷ್ಯೆ ಮಾಡಿವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 9 ಮಂದಿ ವೀರಶೈವ ಲಿಂಗಾಯತ ಸಂಸದರು ಆಯ್ಕೆಯಾಗಿದ್ದರೂ ಒಬ್ಬರಿಗೂ ಕೇಂದ್ರದಲ್ಲಿ ಕ್ಯಾಬಿನೆಟ್ ದರ್ಜೆ ಕೊಡದೆ ಅನ್ಯಾಯ ಮಾಡಲಾಗಿದೆ. ಕೇವಲ ರಾಜ್ಯ ಖಾತೆಯನ್ನು ಕೊಟ್ಟಿರುವುದು ಸರಿಯಲ್ಲ. ಈ ಬಗ್ಗೆ ಸಮುದಾಯದ ಜನ ಬೇಸರಗೊಂಡಿದ್ದಾರೆ ಎಂದರು.
ಎರಡೂ ಪಕ್ಷಗಳು ಬಸವಾದಿ ಶಿವಶರಣನ್ನು ಮತಗಳಿಕೆಗೆ ಬಳಕೆ ಮಾಡಿಕೊಂಡು ಅವರ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿವೆ. ಧಾರವಾಡ ಸಂಸದರಾದ ಪ್ಲಹ್ಲಾದ್ ಜೋಷಿ ಅವರು ಅವರ ಸಮಾಜದವರನ್ನೇ ತುಳಿದಿದ್ದಾರೆ. ಎಲ್ಲ ಸಮಾಜ ನಾಯಕರು ಮತ್ತು ಲಿಂಗಾಯತರು ಇತ್ತ ಸಾಯಲೂ ಬಾರದು, ಇತ್ತ ಬದುಕಿರಲು ಬಾರದು ಹಾಗೆ ಜೋಷಿ ಮಾಡಿದ್ದಾರೆ. ಆ ಕಾರಣ ನಾವು ಚುನಾವಣೆಗೆ ಸ್ಪರ್ಧಿಸುವುದು ಅನಿವಾರ್ಯವಾಗಿದೆ.
ಈ ಬಗ್ಗೆ ಇಂದು ನಡೆದ ಮಠಾಧೀಪತಿಗಳ ಸಭೆಯಲ್ಲಿ ನಿರ್ಣಯ ಮಾಡಿದ್ದೇವೆ ಎಂದು ದಿಂಗಾಲೇಶ್ವರಸ್ವಾಮೀಜಿ ಹೇಳಿದರು ಬೆಂಗಳೂರು ದಕ್ಷಿಣದಲ್ಲಿ ವಿ. ಸೋಮಣ್ಣನವರಿಗೆ ಟಿಕೆಟ್ ಕೊಡುವುದನ್ನು ಬಿಟ್ಟು ತುಮಕೂರಿಗೆ ಕೊಟ್ಟು ವೀರಶೈವ ಲಿಂಗಾಯತರು ಜಗಳವಾಡುವAತೆ ಮಾಡಿರುವುದು ನಮ್ಮ ಸಮಾಜಕ್ಕೆ ನೋವಾಗಿದೆ. ವೀರಶೈವ ಲಿಂಗಾಯತರ ಪ್ರಾಬಲ್ಯ ಕ್ಷೇತ್ರದಲ್ಲಿ ಬ್ರಾಹ್ಮಣರಿಗೆ ಕೊಟ್ಟಂತೆ, ಬ್ರಾಹ್ಮಣರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ನಮ್ಮ ಸಮುದಾಯದವರಿಗೆ ಕೊಡದಿರಲು ಕಾರಣ ಏನೆಂದು ಪ್ರಶ್ನಿಸಿರುವ ಸ್ವಾಮೀಜಿ, ನಮ್ಮ ನಾಯಕರು ಮತ್ತು ಸಮಾಜದವರನ್ನು ತುಳಿಯುವುದರಲ್ಲಿ ಜೋಷಿಯವರ ಪಾತ್ರ ಎದ್ದು ಕಾಣುತ್ತಿದೆ ಎಂದರು .
ಹಾವೇರಿ ಮತ ಕ್ಷೇತ್ರದಲ್ಲಿ ಈಶ್ವರಪ್ಪನ ಮಗನಿಗೆ ಟಿಕೆಟ್ ತಪ್ಪಿಸಿದ್ದು ಇದೇ ಜೋಷಿ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ವಿವಿಧ ಮಠಾಧೀಶರುಗಳು ಉಪಸ್ಥಿತರಿದ್ದರು.


