Tuesday, October 6, 2026
Homeರಾಜ್ಯಬೆಂಗಳೂರು : ದಸರಾ ಹಬ್ಬಕ್ಕೆ ಸರಕಾರದಿಂದ ಜನಸಾಮಾನ್ಯರಿಗೆ ಬಿಗ್ ಶಾಕ್,ಹಾಲಿನ ದರ ₹8 ಹೆಚ್ಚಳ, ಬಸ್...

ಬೆಂಗಳೂರು : ದಸರಾ ಹಬ್ಬಕ್ಕೆ ಸರಕಾರದಿಂದ ಜನಸಾಮಾನ್ಯರಿಗೆ ಬಿಗ್ ಶಾಕ್,ಹಾಲಿನ ದರ ₹8 ಹೆಚ್ಚಳ, ಬಸ್ ಪ್ರಯಾಣ ದರವೂ ಏರಿಕೆ : ಸಚಿವ ಸಂಪುಟದಿಂದ ತಾತ್ವಿಕ ಒಪ್ಪಿಗೆ…?

ಬೆಂಗಳೂರು : ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ. ಹಾಲಿನ ದರವನ್ನು ಲೀಟರ್‌ಗೆ ₹8 ಹೆಚ್ಚಳ ಮಾಡುವುದರ ಜೊತೆಗೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನೂ ಹೆಚ್ಚಿಸಲು ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ.

ಹಾಲು ಮತ್ತು ಸಾರಿಗೆ ದರ ಏಕಕಾಲದಲ್ಲಿ ಏರಿಕೆಯಾಗಲಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.

ನವೆಂಬರ್ 1ರಿಂದ ಹಾಲಿನ ದರ ಪರಿಷ್ಕರಣೆ?.

ಹಾಲಿನ ದರ ಹೆಚ್ಚಳವು ನವೆಂಬರ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಹೆಚ್ಚಳವಾಗುವ ₹8ರಲ್ಲಿ ₹6 ಅನ್ನು ಹಾಲು ಉತ್ಪಾದಕ ರೈತರಿಗೆ ನೀಡಲು ಹಾಗೂ ಉಳಿದ ₹2 ಅನ್ನು ಜಿಲ್ಲಾ ಹಾಲು ಒಕ್ಕೂಟಗಳ ನಿರ್ವಹಣೆಗೆ ಬಳಸಲು ನಿರ್ಧರಿಸಲಾಗಿದೆ.
ಜಿಲ್ಲಾ ಹಾಲು ಒಕ್ಕೂಟಗಳು 70:30 ಅನುಪಾತದಲ್ಲಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದರೂ, ರೈತರ ಹಿತದೃಷ್ಟಿಯಿಂದ 80:20 ಅನುಪಾತವನ್ನು ಸರ್ಕಾರ ಪರಿಗಣಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಯಾವ ಹಾಲಿನ ದರ ಎಷ್ಟಾಗಲಿದೆ : ದರ ಪರಿಷ್ಕರಣೆ ಜಾರಿಯಾದರೆ ಪ್ರಮುಖ ಹಾಲಿನ ಪ್ಯಾಕೆಟ್‌ಗಳ ದರ ಹೀಗಿರಲಿದೆ :

ಟೋನ್ಡ್ ಹಾಲು: ₹46 → ₹54

ಹೋಮೋಜಿನೈಸ್ಡ್ ಟೋನ್ಡ್ ಹಾಲು : ₹47 → ₹55.

ಹೋಮೋಜಿನೈಸ್ಡ್ ಹಸುವಿನ ಹಾಲು: ₹50 → ₹58.

ಶುಭಂ/ಸ್ಪೆಷಲ್ ಹಾಲು: ₹52 → ₹60.

ಸಮೃದ್ಧಿ ಹಾಲು: ₹55 → ₹64.

ಆರೆಂಜ್ ಪ್ಯಾಕೆಟ್, ಗ್ರೀನ್ ಸ್ಪೆಷಲ್ ಹಾಗೂ ಸಾಮಾನ್ಯ ಗ್ರೀನ್ ಹಸುವಿನ ಹಾಲು : ₹58.

ಬಸ್ ಪ್ರಯಾಣ ದರವೂ ಹೆಚ್ಚಳ.

ಇದರ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರವನ್ನೂ ₹3ರಿಂದ ₹30ರವರೆಗೆ ಹೆಚ್ಚಿಸಲು ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಚುನಾವಣಾ ಆಯೋಗದ ಅನುಮತಿ ಪಡೆದ ಬಳಿಕವಷ್ಟೇ ಬಸ್ ದರ ಏರಿಕೆ ಕುರಿತು ಅಧಿಕೃತ ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ.

ಜನರಿಗೆ ‘ಡಬಲ್ ಶಾಕ್’?.

ಹಾಲಿನ ದರ ಹೆಚ್ಚಳದಿಂದ ದಿನನಿತ್ಯದ ಅಡುಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದರೆ, ಬಸ್ ದರ ಏರಿಕೆಯಿಂದ ಉದ್ಯೋಗ, ಶಿಕ್ಷಣ ಸೇರಿದಂತೆ ಪ್ರತಿದಿನ ಸಾರ್ವಜನಿಕ ಸಾರಿಗೆ ಬಳಸುವವರ ಪ್ರಯಾಣ ವೆಚ್ಚವೂ ಹೆಚ್ಚಾಗಲಿದೆ. ಒಂದೆಡೆ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದರೂ, ಮತ್ತೊಂದೆಡೆ ಪ್ರತಿ ಲೀಟರ್‌ಗೆ ಹೆಚ್ಚುವರಿಯಾಗಿ ಸಿಗಲಿರುವ ₹6 ರೈತರ ಆದಾಯ ಹೆಚ್ಚಿಸಲು ನೆರವಾಗಲಿದೆ ಎಂಬುದು ಸರ್ಕಾರದ ವಾದವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular