ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಪೇಕ್ಷೆ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಒತ್ತಾಯದ ಮೇರೆಗೆ ಮಂಜುನಾಥ್ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಧುಮುಕಿದ್ದಾರೆ ಎಂದು ಡಾ.ಮಂಜುನಾಥ್ ಅವರ ಪತ್ನಿ ಅನುಸೂಯ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಅವರಿಗೆ ಮತ ನೀಡುವ ಮೂಲಕ ಶಕ್ತಿ ತುಂಬಿದರೆ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತರುವುದು ನಿಶ್ಚಿತ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ವಿರುದ್ಧ ತಮ್ಮ ಪತಿ ಗೆಲ್ಲುವ ವಿಶ್ವಾಸವಿದೆ ಎಂದ ಅವರು, ಸ್ಪರ್ಧೆಯ ಬಗ್ಗೆ ಸಂತೋಷವೂ ಇದೆ, ಹಾಗೆಯೇ ನೋವು ಸಹ ಇದೆ.ರಾಜಕೀಯದಲ್ಲಿ ಏಳು ಬೀಳು ಇರುತ್ತದೆ. ಡಾ.ಮಂಜುನಾಥ್ ಬಹಳ ಸೂಕ್ಷ್ಮ ಮನಸ್ಸಿನವರು. ಚುನಾವಣೆಯನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಆತಂಕವಿದೆ ಎಂದು ತಿಳಿಸಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮೊದಲು ಹಣ ಪಾವತಿ ನಂತರ ಎನ್ನುವ ಘೋಷವಾಕ್ಯ ಜಾರಿಗೊಳಿಸಿರುವ ಅವರು, ಆಸ್ಪತ್ರೆ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಇನ್ನೂ, ಡಾ.ಮಂಜುನಾಥ್ ಅವರ ಪರವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿಭಿನ್ನವಾಗಿ ಪ್ರಚಾರ ಮಾಡುತ್ತೇನೆ. ಈಗಿನ ಚುನಾವಣೆಯ ಪ್ರಚಾರ ಶೈಲಿ ಬದಲಾಗಿದೆ. ಅದಕ್ಕೆ ತಕ್ಕಂತೆ ಪ್ರಚಾರ ಕಾರ್ಯ ನಡೆಸಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಮಂಜುನಾಥ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದರು.