ಬೆಂಗಳೂರು : ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್‌ನನ್ನು ಅಪಹರಿಸಿ 5 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಬರ್ಬರವಾಗಿ ಕೊಲೆಗೈದು ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳಿಗೆ ಹುಳಿಮಾವು ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ಕೊಲೆಗಾರರಾದ ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಅಪಹರಣ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿತರ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗಿದೆ. ಬಾಲಕ ನಿಶ್ಚಿತ್‌ನನ್ನು ಅಪಹರಿಸಿ ಬರ್ಬರವಾಗಿ ಕೊಲೆಗೈದು ಬೆಂಕಿ ಹಚ್ಚಿದ್ದ ಆರೋಪಿಗಳು ನಿನ್ನೆ ಮಧ್ಯರಾತ್ರಿ ಕಗ್ಗಲೀಪುರ ರಸ್ತೆಯ ಬಳಿ ಅಡಗಿರುವ ಮಾಹಿತಿಯನ್ನು ಆಧರಿಸಿ ಬಂಧಿಸಲು ಹುಳಿಮಾವು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಮಾರಕಾಸ್ತçಗಳಿಂದ ಆರೋಪಿಗಳು ದಾಳಿಗೆ ಮುಂದಾದಾಗ, ಆತ್ಮರಕ್ಷಣೆಗೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಪಿಎಸ್‌ಐ ಅರವಿಂದ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೆ ಪರಾರಿಯಾಗಲು ಯತ್ನಿಸಿದಾಗ ಆರೋಪಿಗಳ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.ಘಟನೆಯಲ್ಲಿ ಗುರುಮೂರ್ತಿಯ ಎರಡು ಕಾಲುಗಳು ಹಾಗೂ ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದೆ, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ :
ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಆತನ ಪೋಷಕರು ವಾಸವಾಗಿದ್ದರು, ಪ್ರತಿಷ್ಠಿತ ಕಾಲೇಜ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ನಿಶ್ಚಿತ್ ತಂದೆಯ ಬಳಿ ಆರೋಪಿ ಗುರುಮೂರ್ತಿ ಹೆಚ್ಚುವರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಆಗಾಗ ಮನೆಗೆ ಹೋಗಿ ಬರುತ್ತಿದ್ದ ಗುರುಮೂರ್ತಿ, ನಿಶ್ಚಿತ್‌ನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಡುವ ಸಂಚು ರೂಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
5 ಲಕ್ಷಕ್ಕೆ ಬೇಡಿಕೆ:
ಬಾಲಕ ನಿಶ್ಚಿತ್ ನಿನ್ನೆ ಸಂಜೆ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಯತ್ತ ಬರುತ್ತಿದ್ದ ನಿಶ್ಚಿತ್‌ನನ್ನು ಆರೋಪಿಗಳು ಅಪಹರಿಸಿದ್ದರು. ಟ್ಯೂಷನ್ ಮುಗಿದು ಸುಮಾರು ಗಂಟೆಗಳಾದರೂ ಮನೆಗೆ ಬಾರದ ಮಗನ ಬಗ್ಗೆ ಪೋಷಕರು ಆಂತಕದಿಂದ ಹುಡುಕಾಟ ನಡೆಸಿದ್ದರು.ನಿರಂತರ ಶೋಧದ ಬಳಿಕವೂ ಮಗನ ಸುಳಿವು ಸಿಗದಿದ್ದಾಗ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟೊತ್ತಿಗಾಗಲೇ ಬಾಲಕನ ತಂದೆಗೆ ಕರೆ ಮಾಡಿದ್ದ ಆರೋಪಿಗಳು ‘ಮಗನನ್ನು ಜೀವಂತವಾಗಿ ನೋಡುವ ಆಸೆಯಿದ್ದರೆ, 5 ಲಕ್ಷ ರೂ ನೀಡುವಂತೆ’ ಡಿಮ್ಯಾಂಡ್ ಮಾಡಿದ್ದರು. ಹಣ ನೀಡುವುದಾಗಿ ಪೋಷಕರೂ ಸಹ ಒಪ್ಪಿಕೊಂಡಿದ್ದರು. ಆದರೆ ಬಾಲಕನನ್ನು ಕೊಂದು ಸುಟ್ಟಿಹಾಕಿರುವುದು ಅವಮಾನವೀಯ ಘಟನೆಯಾಗಿದ್ದು ನಗರವೇ ಬೆಚ್ಚಿಬಿದ್ದಿದೆ.