ಬೆಂಗಳೂರು : ದಲಿತರಿಗೆ ಮೀಸಲಿಟ್ಟ ಎಸ್ಸಿಪಿ, ಟಿಎಸ್ಪಿ ನಿಧಿಯಲ್ಲಿ ಕಳೆದ ವರ್ಷ 11 ಸಾವಿರ ಕೋಟಿ ರೂ. ಹಾಗೂ ಪ್ರಸಕ್ತ ವರ್ಷ 14 ಸಾವಿರ ಕೋಟಿ ರೂ. ಸೇರಿದಂತೆ ಒಟ್ಟು 25 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದ್ದಾರೆ.
ಬಿಜೆಪಿ ಕೆ.ಆರ್.ಪುರ ಮಂಡಲ ಮಾಜಿ ಸಚಿವ ಬೈರತಿ ಬಸವರಾಜ್ ಅವರ ನಿವಾಸದಲ್ಲಿ ಸೋಮವಾರ ಏರ್ಪಡಿಸಿದ್ದ `ಭೀಮ ಸಂಗಮ ಅಭಿಯಾನ’ದಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಸಮುದಾಯವರ ಉದ್ಯಮ, ವ್ಯಾಪಾರ, ಅಭಿವೃದ್ಧಿ ಮತ್ತಿತರ ಉದ್ದೇಶಕ್ಕೆ ಬಳಕೆ ಆಗಬೇಕಿದ್ದ ಹಣವನ್ನು ಕೊಟ್ಟಿದ್ದರೆ ಅನೇಕ ದಲಿತ ಕುಟುಂಬಗಳು ಮುಂದೆ ಬರುತ್ತಿದ್ದವು. ಪರಿಶಿಷ್ಟ ಹಣವನ್ನು ಗ್ಯಾರಂಟಿ ಯೋಜನೆಗಾಗಿ ಬಳಸಿದ್ದಾರೆ.
ಆದರೆ ದಲಿತ ಮುಖಂಡರು, ದಲಿತ ವಿದ್ಯಾರ್ಥಿಗಳು, ದಲಿತ ವಕೀಲರು ಇದರ ಬಗ್ಗೆ ಪ್ರಶ್ನೆ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಸಂವಿಧಾನ ಬದಲಿಸುವ ಕುರಿತು, ಸಂವಿಧಾನ ರದ್ದು ಮಾಡುತ್ತಾರೆಂದು ಅನೇಕ ಅಪಪ್ರಚಾರ ಮಾಡುತ್ತಿದ್ದಾರೆ. ಯಾವತ್ತೂ ಕೂಡ, ಯಾರೂ ಕೂಡ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿಜೆಪಿ ದಲಿತ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ಇದು ಖಂಡನೀಯ. ಇಂಥ ವಿಚಾರಗಳ ಕುರಿತು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ತಿಳಿಸಿದರು. ನಗರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಕಾರ್ಯಕ್ರಮದ ಸಂಚಾಲಕ ಮುನಿಕೃಷ್ಣ, ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಪ್ರಮುಖರಾದ ಸದಾಶಿವ್, ಚಿದಾನಂದ, ಮುನಿರಾಜು, ಸಂಪತ್, ಮಂಜುಳಾ ಶ್ರೀನಿವಾಸ್, ರಮೇಶ್, ಮತ್ತಿತರರಿದ್ದರು.