ಬೆಂಗಳೂರು : ಮಾಜಿ ಭೂಗತ ಪಾತಕಿ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಸಾವಿನ ಬಳಿಕ ಭಾರೀ ಸದ್ದು ಮಾಡಿದ್ದ ಆಸ್ತಿ ವಿವಾದಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಮುತ್ತಪ್ಪ ರೈ ಅವರ ಆಸ್ತಿಯಲ್ಲಿ ತನಗೂ ಪಾಲಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ ಎರಡನೇ ಪತ್ನಿ ಅನುರಾಧ ಅವರಿಗೆ ಕಾನೂನಿನ ಅನ್ವಯ ಆಸ್ತಿ ನೀಡಲು ಮೊದಲ ಪತ್ನಿಯ ಮಕ್ಕಳು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಂತೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ ರಾಜಿಯೊಂದಿಗೆ ಸುಖಾಂತ್ಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಯಕರ್ನಾಟಕ ಸಂಘಟನೆ ಜವಾಬ್ದಾರಿ ಯಾರಿಗೆ ಎನ್ನುವುದನ್ನು ವಿಲ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ವಿಲ್ ಪ್ರಕಾರ ರೈ ಆಸ್ತಿ ಸುಮಾರು 2 ಸಾವಿರ ಕೋಟಿ ರುಪಾಯಿಗಳಷ್ಟಿದೆ ಎಂದು ತಿಳಿದು ಬಂದಿದೆ. ಮಾಜಿ ಡಾನ್, ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಮೇ. 15ರಂದು ಇಹಲೋಕ ತ್ಯಜಿಸಿದ್ದರು.
ಮುತ್ತಪ್ಪ ರೈ, ತಾವು ಮೃತಪಡುವ ಒಂದು ವರ್ಷದ ಹಿಂದೆ ಅಂದ್ರೆ 2019ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಮಾಡಿಟ್ಟಿದ್ದರು. ವಕೀಲ ನಾರಾಯಣಸ್ವಾಮಿಯವರನ್ನು ವಿಲ್ ಎಕ್ಸಿಕ್ಯೂಟರ್ ಆಗಿ ನೇಮಿಸಿ, ಅಡ್ವೋಕೇಟ್ ಗೀತಾರಾಜ್ ಎಂಬುವವರ ಮೂಲಕ ಆಸ್ತಿಗೆ ಸಂಬಂಧಿಸಿದಂತೆ ವಿಲ್ ಬರೆಸಿದ್ರು. ಸಾವಿರ ಕೋಟಿಗೂ ಅಧಿಕ ಮೌಲ್ಯದ ಆಸ್ತಿಗೆ ಸುಮಾರು 41 ಪುಟಗಳ ವಿಲ್ ಬರೆಸಿದ್ದ ಮುತ್ತಪ್ಪ ರೈ, ಪುತ್ರರಾದ ರಾಕಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನ್ ರೈ, ಎರಡನೇ ಪತ್ನಿ ಅನುರಾಧ ರೈ ಸೇರಿ ಮನೆಗೆಲಸದವರ ಬಗ್ಗೆಯೂ ಉಲ್ಲೇಖ ಮಾಡಿದ್ದರು.
ಮುತ್ತಪ್ಪ ರೈ ಮಕ್ಕಳಾದ ರಾಕಿ ಹಾಗೂ ರಿಕ್ಕಿ ರೈ ಅವರು ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ರು, ಅನುರಾಧ ಅವರಿಗೆ ಸೇರಬೇಕಾದ ಆಸ್ತಿಯನ್ನು ವಿಲ್ ನಂತೆ ನೀಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. 2ನೇ ಪತ್ನಿ ಅನುರಾಧಾಗೆ ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಎಚ್ ಡಿ ಕೋಟೆ ಆಸ್ತಿ, ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್‍ನಲ್ಲಿ ಉಲ್ಲೇಖವಾಗಿತ್ತು ಎಂದು ರೈ ವಿಲ್ನಲ್ಲಿ ತಿಳಿಸಿದ್ದರು.
ಪ್ರಕರಣ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ರಾಕಿ ಹಾಗೂ ರಿಕ್ಕಿ ರೈ ಅವರು ಕೆಲ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದ್ದರು. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಅನುರಾಧ ಅವರು ಮಾರಾಟ ಮಾಡದಂತೆ ಸ್ಟೇ ತಂದಿದ್ದರು. ಆ ಬಳಿಕ ಸ್ಟೇ ವೆಕೆಟ್ ಮಾಡಲು ಕಾನೂನು ಹೋರಾಟ ಮುಂದುವರೆದಿತ್ತು, ಕೆಳಹಂತದ ನ್ಯಾಯಾಲದಯಲ್ಲಿ ಆಸ್ತಿ ಮಾರಾಟಕ್ಕೆ ನೀಡಿದ್ದ ಸ್ಟೇ ವೆಕೆಟ್ ಆಗುತ್ತಿದ್ದಂತೆ, ಅನುರಾಧ ಅವರು ಹೈಕೋರ್ಟ್ ಮೆಟ್ಟಲೇರಿದ್ದರು. ಆಸ್ತಿ ವಿವಾದವೂ ಹಲವು ವರ್ಷಗಳಿಂದ ಕೋರ್ಟ್ ನಲ್ಲಿ ಸಾಗುತ್ತಿತ್ತು.
ಸದ್ಯ ಕಾಂಪ್ರಮೈಸ್ ಪಿಟಿಷನ್ ಮೂಲಕ ಆಸ್ತಿ ವಿವಾದ ಇತ್ಯರ್ಥಗೊಂಡಿದೆ. ಸುಮಾರು ನೂರು ಕೂಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಮುತ್ತಪ್ಪ ರೈ ಎರಡನೇ ಪತ್ನಿಗೆ ನೀಡಲಾಗಿದೆ. ಕೋರ್ಟ್ ಸಂಧಾನದ ಮೂಲಕ ಅನುರಾಧ ರೈ ಅವರಿಗೆ ಮುತ್ತಪ್ಪ ರೈ ಮಕ್ಕಳಾದ ರಿಕ್ಕಿ ರೈ, ರಾಕಿ ರೈ ನೀಡಿರುವ ಆಸ್ತಿ ವಿವಿರ ಹೀಗಿದೆ.
*ಏಳು ಕೋಟಿ ಹಣ
*ಮಂಡ್ಯದ ಪಾಂಡವಪುರದ ಬಳಿ 22 ಎಕರೆ ಜಮೀನು
*ಮೈಸೂರಿನಲ್ಲಿ 4800 ಚದರಡಿ ನಿವೇಶನ ಹಾಗೂ ನಿವೇಶನದಲ್ಲಿನ ಮನೆ
*ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿ ಐದೂವರೆ ಎಕರೆ ಜಮೀನು
ಸದ್ಯ ಅನುರಾಧ ರೈ ಕೋರ್ಟ್ ಮೂಲಕ ಮುತ್ತಪ್ಪ ರೈ ಪುತ್ರರಿಂದ ಪಡೆದಿರುವ ಆಸ್ತಿ ಮೌಲ್ಯ ನೂರು ಕೋಟಿ ಬೆಲೆಬಾಳುತ್ತೆ ಎನ್ನಲಾಗ್ತಿದೆ.ಒಟ್ಟಿನಲ್ಲಿ ಮುತ್ತಪ್ಪ ರೈಯ ಎರಡನೇ ಪತ್ನಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ.