ಬೆಂಗಳೂರು: ಬಸ್ ಟಿಕೆಟ್, ಇಂಧನ, ಹಾಲು, ಮದ್ಯ ಸೇರಿದಂತೆ ಹಲವು ವಸ್ತುಗಳ ದರ ಏರಿಕೆ ಮಾಡಿರುವ ಸರ್ಕಾರ ಈಗ ಜನನ ಹಾಗೂ ಮರಣ ನೋಂದಣಿ ಪ್ರಮಾಣ ಪತ್ರದ ದರವನ್ನು ಶೇ. 10 ರಷ್ಟು ಏರಿಕೆ ಮಾಡಿದೆ.
ಕೇವಲ 5 ರೂ.ಗೆ ದೊರೆಯುತ್ತಿದ್ದ ಪ್ರಮಾಣ ಪತ್ರ ದರ ಈಗ ಏಕಾಏಕಿ 5೦ ರೂ.ಗಳಿಗೆ ಏರಿಕೆಯಾಗಿದೆ. ನಗರಾಭಿವೃದ್ಧಿ ಇಲಾಖೆ ಫೆ.4 ರಿಂದಲೇ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದು ರಾಜ್ಯದ್ಯಂತ ಹೊಸ ದರ ಜಾರಿಗೆ ಬಂದಿದೆ. ಪ್ರತಿ ಪ್ರಮಾಣ ಪತ್ರ ಪಡೆಯಲು 50 ರೂ. ಪಾವತಿಸಬೇಕಾಗಿದೆ. ನಗರಾಭಿವೃದ್ಧಿ ಇಲಾಖೆ ದರ ಏರಿಕೆ ಮಾಡಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನನ ಹಾಗೂ ಮರಣ ನೋಂದಣಿಯಾದ ಒಂದು ತಿಂಗಳೊಳಗೆ ಮುದ್ರಿತ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು 5 ರೂ. ಪಾವತಿಸಬೇಕಿತ್ತು. ಈಗ 50 ರೂ. ಆಗಿದೆ. ಫೆ.4ರ ಮಂಗಳವಾರದಿAದಲೇ ಹೊಸ ದರ ಜಾರಿಗೆ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶಗೊಂಡರು. ಕಡಿಮೆ ಮೊತ್ತದ ಹಣ ತಂದು ಪ್ರಮಾಣ ಪತ್ರ ಪಡೆಯಲು ಮುಂದಾದ ಸಾರ್ವಜನಿಕರು ದರ ಏರಿಕೆ ನೋಡಿ ಸಿಡಿಮಿಡಿಗೊಂಡರು.ಇಲಾಖೆ ಯಾವುದೇ ಮಾಹಿತಿ ನೀಡದೇ ದರ ಏರಿಕೆ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಯಾವುದಕ್ಕೆ ಎಷ್ಟು ಏರಿಕೆ?
ಜನನ ಅಥವಾ ಮರಣ ಪ್ರಮಾಣ ಪತ್ರವನ್ನು ಘಟನೆ ಘಟಿಸಿದ 21 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಿ ಪಡೆಯಬೇಕು. ಈ ವೇಳೆ ಒಂದು ಪ್ರತಿ ಉಚಿತವಾಗಿ ನೀಡಲಾಗುತ್ತದೆ. 21ರಿಂದ 30 ದಿನಗಳ ಒಳಗಾಗಿ ಜನನ ಅಥವಾ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸಿದಲ್ಲಿ 2 ರೂ. ದಂಡ ಪಾವತಿಸಬೇಕಾಗಿತ್ತು. ಈಗ 200 ರೂ. ದಂಡ ಪಾವತಿಸಬೇಕು. 31 ದಿನದಿಂದ 365 ದಿನದೊಳಗೆ 5 ರೂ. ಇದ್ದ ಶುಲ್ಕ ಈಗ 5೦೦ ರೂ. ಆಗಿದೆ. ಒಂದು ವರ್ಷದ ನಂತರ 10 ರೂ.ಗೆ 1000 ರೂ.ಗೆ ಏರಿಕೆಯಾಗಿದೆ.
ಎರಡೂ ಪಮಾಣ ಪತ್ರ ಅತ್ಯಗತ್ಯ .
ಜನನ ಹಾಗೂ ಮರಣ ಪತ್ರ ಬಹುತೇಕ ವ್ಯವಹಾರಗಳಿಗೆ ಅತ್ಯಗತ್ಯ. ಮಕ್ಕಳನ್ನು ಶಾಲೆಗೆ ಸೇರಿಸಲು ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಅಲ್ಲದೆ ಮಕ್ಕಳಿಗೆ ಆಧಾರ್ ಕಾರ್ಡ್ ನೋಂದಣಿ ಮಾಡಲು ಜನನ ಪ್ರಮಾಣ ಪತ್ರ ಅಗತ್ಯ. ಮಕ್ಕಳು ಎಸ್ಸೆಸ್ಸೆಲ್ಸಿವರೆಗೂ ಈ ಜನನ ಪ್ರಮಾಣ ಪತ್ರ ಅಮೂಲ್ಯವಾದುದು. ಇನ್ನು ಮರಣ ಪತ್ರ ಆಸ್ತಿ ಹಂಚಿಕೆ, ಆಸ್ತಿ ವಿಭಾಗ, ಪರಭಾರೆ ಮಾಡಲು ಅಗತ್ಯವಾಗಿದೆ.