ಬೆಂಗಳೂರು : ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೊಳಗಾಗಿ ಮೃತಪಟ್ಟ ಚಾಲಕ ಅಥವಾ ಸವಾರನ ಕುಟುಂಬಕ್ಕೆ ಪೂರ್ಣ ಪ್ರಮಾಣದ ವಿಮಾ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರಿನಲ್ಲಿ 2015ರಲ್ಲಿ ನಡೆದ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ಮೃತ ಶ್ರೀನಿವಾಸ್ ಹರಿಕಂತ್ರ ಅವರ ಕುಟುಂಬಕ್ಕೆ ₹3.44 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ಪೀಠ, ಅಪಘಾತದ ವೇಳೆ ಮೃತರು ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದ ಅಪಘಾತಕ್ಕೆ ಅವರದೇ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಈ ಹಿನ್ನೆಲೆಯಲ್ಲಿ, ಮೃತರ ಕಾನೂನುಬದ್ಧ ವಾರಸುದಾರರು ಪೂರ್ಣ ಪರಿಹಾರಕ್ಕೆ ಅರ್ಹರಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಮೊದಲು ನೀಡಿದ್ದ ₹3.44 ಲಕ್ಷ ಪರಿಹಾರವನ್ನು ₹1 ಲಕ್ಷಕ್ಕೆ ಇಳಿಸಿತು. ಆದರೆ ವಾಹನದ ಮಾಲೀಕರು ಪಡೆದಿದ್ದ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯ ನಿಯಮಗಳ ಪ್ರಕಾರ ಗರಿಷ್ಠ ₹1 ಲಕ್ಷವನ್ನು ವಿಮಾ ಕಂಪನಿ ಪಾವತಿಸಬೇಕು ಎಂದು ನಿರ್ದೇಶಿಸಿತು.
ಪ್ರಕರಣದ ಹಿನ್ನೆಲೆ : 2015ರ ಫೆಬ್ರವರಿ 5ರಂದು ಶ್ರೀನಿವಾಸ್ ಹರಿಕಂತ್ರ ಅವರು ಬೆಂಗಳೂರಿನ ಬನಶಂಕರಿ ಪ್ರದೇಶದಲ್ಲಿ ಬೈಕ್ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರು. ಘಟನೆಯಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಅವರ ಕುಟುಂಬಸ್ಥರು ನ್ಯಾಯಾಧಿಕರಣದ ಮೊರೆ ಹೋಗಿ ₹3.44 ಲಕ್ಷ ಪರಿಹಾರ ಪಡೆದಿದ್ದರು. ಈ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಅಂಗೀಕರಿಸಿ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.


