ಬೆಂಗಳೂರು : 600 ಚಿತ್ರದಲ್ಲಿ ಪಾತ್ರವಹಿಸಿದ ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಅವರು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಇಂದು (ಡಿಸೆಂಬರ್ 8) ನಿಧನರಾಗಿದ್ದಾರೆ. 50 ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದ ನಟರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. ಲೀಲಾವತಿ ನಿಧನಕ್ಕೆ ಅಭಿಮಾನಿಗಳು, ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ನಟನೆ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳ ಮೂಲಕವೂ ಲೀಲಾವತಿ ಗುರುತಿಸಿಕೊಂಡಿದ್ದರು. ಪುತ್ರ ವಿನೋದ್ ರಾಜ್ ಅವರನ್ನು ಲೀಲಾವತಿ ಅಗಲಿದ್ದಾರೆ.
ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ದರ್ಶನ್, ಅಭಿಷೇಕ್ ಅಂಬರೀಷ್, ಅರ್ಜುನ್ ಸರ್ಜಾ, ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಬಂದು ವಿನೋದ್ ರಾಜ್ಗೆ ಧೈರ್ಯ ತುಂಬಿದ್ದರು.ನೆಲಮಂಗಲದ ಸೋಲದೇವನಹಳ್ಳಿ ಬಳಿ ಪುತ್ರ ವಿನೋದ್ ರಾಜ್ ಜೊತೆ ವಾಸವಾಗಿದ್ದರು. ಸಿನಿಮಾದಿಂದ ದೂರ ಉಳಿದುಕೊಂಡಿದ್ದ ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ವಿನೋದ್ ರಾಜ್ ಕೂಡ ಕೃಷಿ ಕೆಲಸ ಮಾಡುತ್ತಿದ್ದಾರೆ. ಲೀಲಾವತಿ ಅವರ ಅನಾರೋಗ್ಯದ ವಿಷಯ ತಿಳಿದ ಬಳಿಕ ಕನ್ನಡ ಚಿತ್ರರಂಗದ ಅನೇಕರು ಸೋಲದೇವನಹಳ್ಳಿಗೆ ಬಂದು ಆರೋಗ್ಯ ವಿಚಾರಿಸಿದ್ದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಅವರು ಕೊನೆಯುಸಿರು ಎಳೆದಿದ್ದಾರೆ.ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ಮಿಸಿದ್ದರು. ಆ ಆಸ್ಪತ್ರೆ ಉದ್ಘಾಟನೆ ಆದ ಕೆಲವೇ ದಿನಗಳ ಬಳಿಕ ಅವರು ಇಹಲೋಕ ತ್ಯಜಿಸಿದ್ದಾರೆ.