ಬೆಂಗಳೂರು : ರಾಜ್ಯದ ಉಪಹಾರ ಅಂಗಡಿಗಳು, ಹೋಟೆಲ್, ರಸ್ತೆ ಬದಿ ತಿಂಡಿ ಅಂಗಡಿಗಳಲ್ಲಿ ಪ್ಲ್ಯಾಸ್ಟಿಕ್ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನ ಕೆಲವು ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ಅದರಿಂದಾಗಿ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ವಿವಿಧೆಡೆಯಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳಲ್ಲಿ ಸುಮಾರು 51 ರಷ್ಟು ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗಾಲಯದಲ್ಲಿ ದೃಢಪಟ್ಟ ಬೆನ್ನಲ್ಲೇ ಕರ್ನಾಟಕ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಘೋಷಿಸಿದ್ದಾರೆ.
ಈ ಕುರಿತು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದು, ರಾಜ್ಯದ ಉಪಹಾರ ಅಂಗಡಿಗಳು, ಹೋಟೆಲ್, ರಸ್ತೆ ಬದಿ ತಿಂಡಿ ಅಂಗಡಿಗಳಲ್ಲಿ ಪ್ಲ್ಯಾಸ್ಟಿಕ್ ಬ್ಯಾನ್ ಮಾಡಲಾಗುವುದು. ಹೋಟೆಲ್, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಇನ್ನು ಮುಂದೆ ಬಳಸುವಂತಿಲ್ಲ. ಆಹಾರ ತಯಾರಿಕೆ, ವಿತರಣೆ ವೇಳೆ ಕೂಡ ಪ್ಲಾಸ್ಟಿಕ್ ಬಳಸಬಾರದು. ಆಹಾರದ ಬಿಸಿಗೆ ಪ್ಲಾಸ್ಟಿಕ್ ನಿಂದ ಹೊರಸೂಸುವ ಪದಾರ್ಥಗಳು ವಿಷಕಾರಿಯಾಗುತ್ತಿದ್ದು ಕ್ಯಾನ್ಸರ್ ಕಾರಕ ಅಂಶಗಳನ್ನು ಸಹ ಹೊರಸೂಸುತ್ತದೆ ಎಂದು ವರದಿಯಿಂದ ದೃಢಪಟ್ಟಿದೆ, ಈ ಹಿನ್ನೆಲೆಯಲ್ಲಿ ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬದಲಿಗೆ ಬಟ್ಟೆಯನ್ನೇ ಬಳಸಬೇಕು ಎಂದು ಕಡ್ಡಾಯವಾಗಿ ನಿಯಮ ಹೊರಡಿಸಲಾಗುವುದು ಎಂದು ತಿಳಿಸಿದರು.
ಹೋಟೆಲ್ಗಳಲ್ಲಿ ಇಡ್ಲಿ ತಯಾರಿಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಹೆಚ್ಚಿನ ಕಡೆ ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ಕಾರಣವಾದ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸುಮಾರು 251 ತಿಂಡಿ ಹೋಟೆಲ್, ಅಂಗಡಿಗಳಿಂದ ಸ್ಯಾಂಪಲ್ಸ್ ಪಡೆಯಲಾಗಿತ್ತು. ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.


