ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ WhatsApp ನಮ್ಮ ಜೀವನದ ಅವಿಭಾಜ್ಯ ಭಾಗವಾದ ಅಪ್ಲಿಕೇಷನ್ ಆಗಿದೆ. ಈ ಅಪ್ಲಿಕೇಷನ್ ಸಹಾಯದಿಂದ ದಿನನಿತ್ಯದ ಸಂವಹನ, ಕೆಲಸದ ಚರ್ಚೆಗಳು, ಕುಟುಂಬದ ಸಂಪರ್ಕಎಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ಮಾಡಬಹುದು. ಆದರೆ ಇದರ ಬಳಕೆ ಹೆಚ್ಚಾದಂತೆ, ಅನಗತ್ಯ ಸಂದೇಶಗಳು, ಸ್ಪ್ಯಾಮ್, ಅಪರಿಚಿತ ಕರೆಗಳು ಮತ್ತು ಕೆಲವೊಮ್ಮೆ ಕಿರುಕುಳದ ಸಮಸ್ಯೆಗಳು ಕೂಡ ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ನಮ್ಮ ಗೌಪ್ಯತೆ ಮತ್ತು ಸಮಯಕ್ಕೆ ಧಕ್ಕೆಯಾಗಬಹುದು.
ನಮ್ಮ ಕನ್ನಡ ಗಿಜ್‌ಬಾಟ್ ಓದುಗರು ಈ ಬಗ್ಗೆ ನಮಗೆ ವಿನಂತಿಸಿಕೊಂಡಿದ್ದರು. ತೊಂದರೆ ನೀಡುವ ವ್ಯಕ್ತಿಗಳನ್ನು WhatsApp ನಿಂದ ದೂರವಿಡುವುದು ಹೇಗೆ ಎಂದು ಕೇಳಿಕೊಂಡಿದ್ದರು. ಹಾಗಾಗಿ, ಈ ಲೇಖನದಲ್ಲಿ WhatsApp ನಿಂದ ತೊಂದರೆ ನೀಡುವ ವ್ಯಕ್ತಿಗಳನ್ನು ಬ್ಲ್ಯಾಕ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದಕ್ಕಾಗಿಯೇ WhatsApp ನೀಡಿರುವ ಬ್ಲಾಕ್ ವೈಶಿಷ್ಟ್ಯವು ನಿಮ್ಮ ಡಿಜಿಟಲ್ ಸುರಕ್ಷತೆ ಕಾಪಾಡುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಇದಕ್ಕಾಗಿ,WhatsApp ಚಾಟ್‌ನಲ್ಲೇ ನೇರವಾಗಿ ಬ್ಲಾಕ್ ಮಾಡಲು, ಮೊದಲು ಆ ಚಾಟ್ ತೆರೆಯಬೇಕು. ನಂತರ ಮೇಲ್ಭಾಗದ ಬಲಗಡೆಯಲ್ಲಿರುವ ಮೂರು ಬಿಂದುಗಳ ಐಕಾನ್ ಒತ್ತಿ, ಅಲ್ಲಿಂದ More > Block ಆಯ್ಕೆಮಾಡಿ. ದೃಢಪಡಿಸಿದ ತಕ್ಷಣ ಆ ಸಂಪರ್ಕ ಬ್ಲಾಕ್ ಆಗುತ್ತದೆ. ಸೆಟ್ಟಿಂಗ್‌ಗಳ ಮೂಲಕ ಬ್ಲಾಕ್ ಮಾಡಲು, WhatsApp Settings > Privacy > Blocked Contacts ವಿಭಾಗಕ್ಕೆ ಹೋಗಿ, ‘Add’ ಆಯ್ಕೆ ಮಾಡಿ ಮತ್ತು ಬ್ಲಾಕ್ ಮಾಡಬೇಕಾದ ಸಂಖ್ಯೆಯನ್ನು ಆಯ್ಕೆಮಾಡಿ. ಇದು ಸಂಪರ್ಕಪಟ್ಟಿಯಲ್ಲಿ ಇರುವ ಅಥವಾ ಇದ್ದ ಯಾವುದೇ ಸಂಖ್ಯೆಯನ್ನು ತ್ವರಿತವಾಗಿ ತಡೆಯಲು ಸಹಾಯ ಮಾಡುತ್ತದೆ.
ಇದಲ್ಲದೆ, ನೀವು ಮತ್ತೊಂದು ಮಾರ್ಗದಿಂದಲೂ ಇಂತಹವರನ್ನು ಬ್ಲಾಕ್ ಮಾಡಬಹುದು. WhatsApp ನಲ್ಲಿ Silence Unknown Callers ಎಂಬ ಇನ್ನೊಂದು ಉಪಯುಕ್ತ ವೈಶಿಷ್ಟ್ಯವೂ ಇದೆ. ಇದನ್ನು ಆನ್ ಮಾಡಿದರೆ, ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಇಲ್ಲದ ಯಾರೇ ಕರೆ ಮಾಡಿದರೂ, ನಿಮ್ಮ ಫೋನ್ ರಿಂಗ್ ಆಗುವುದಿಲ್ಲ. ಆದರೆ ಆ ಕರೆಗಳು Call List ನಲ್ಲಿ ದಾಖಲಾಗುತ್ತವೆ. ಈ ವೈಶಿಷ್ಟ್ಯ ಸ್ಪ್ಯಾಮ್ ಕರೆಗಳು, ವಂಚನೆ ಪ್ರಯತ್ನಗಳು, ಅಥವಾ ಅಪ್ರತೀಕ್ಷಿತ ಕಿರುಕುಳಗಳನ್ನು ತಡೆಯಲು ಬಹಳ ಪರಿಣಾಮಕಾರಿ.
ಯಾರಾದರೂ ತೊಂದರೆ ನೀಡುವ ಸಂಪರ್ಕವನ್ನು ಬ್ಲಾಕ್ ಮಾಡಿದರೆ, ಅವರು ನಿಮಗೆ ಸಂದೇಶ ಕಳುಹಿಸುವುದು, ಕರೆ ಮಾಡುವುದು ಅಥವಾ ನಿಮ್ಮ ಪ್ರೊಫೈಲ್ ಅಪ್ಡೇಟ್‌ಗಳನ್ನು ನೋಡುವುದೇ ಸಾಧ್ಯವಿಲ್ಲ. ಈ ಪ್ರಕ್ರಿಯೆ ಸಂಪೂರ್ಣವಾಗಿ ಗೌಪ್ಯವಾಗಿದ್ದು, ನೀವು ಬ್ಲಾಕ್ ಮಾಡಿದ ವಿಷಯವನ್ನು ಎದುರಿನ ವ್ಯಕ್ತಿಗೆ ತಿಳಿಯುವುದಿಲ್ಲ. ಹಾಗಾಗಿ, WhatsApp ನ ಬ್ಲಾಕ್ ಮತ್ತು ಮ್ಯೂಟ್ ವೈಶಿಷ್ಟ್ಯಗಳು ಬಳಕೆದಾರರಿಗೆ ಹೆಚ್ಚು ನಿಯಂತ್ರಣ, ಸುರಕ್ಷತೆ ಮತ್ತು ನೆಮ್ಮದಿಯನ್ನು ನೀಡುತ್ತವೆ ಎಂದು ಹೇಳಬಹುದು.
WhatsApp ನಲ್ಲಿ ಅನಗತ್ಯ ತೊಂದರೆಗಳನ್ನು ತಪ್ಪಿಸಲು ಮತ್ತು ಸ್ವಂತ ಡಿಜಿಟಲ್ ಪ್ರಪಂಚವನ್ನು ರಕ್ಷಿಸಲು ಈ ಉಪಯುಕ್ತ ಆಯ್ಕೆಗಳನ್ನು ಬಳಸುವುದು ಬಹಳ ಅಗತ್ಯ. ನೀವು ಕೂಡ WhatsApp ನಲ್ಲಿ ಅಪರಿಚಿತರಿಂದ ಕಿರಿಕಿರಿ ಅನುಭವಿಸಿದ್ದೀರಾ?..ಹಾಗಾದರೆ, ಕೂಡಲೇ ಈ ಮೇಲಿನ ಆಯ್ಕೆಗಳನ್ನು ಈಗಲೇ ಸಕ್ರಿಯಗೊಳಿಸಿ. ಮತ್ತು ಹೆಚ್ಚು ಜನರಿಗೆ ಈ ಮಾಹಿತಿಯನ್ನು ತಲುಪಿಸಲು ಶೇರ್ ಮಾಡಿ ಸಹಾಯ ಮಾಡಿ.


