ಬೀದರ್ : ವಿವಾಹಿತ ಮಹಿಳೆಯನ್ನು ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸಿದ ಆರೋಪದಡಿ ಗಂಡ ಸೇರಿ ನಾಲ್ವರ ವಿರುದ್ಧ ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಟಗುಪ್ಪಾ ತಾಲೂಕಿನ ಗೋವಿಂದ ತಾಂಡಾ ನಿವಾಸಿ ಭಾರತಿಭಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಎರಡು ವರ್ಷಗಳ ಹಿಂದೆ ತೆಲಂಗಾಣದ ವಿಟ್ಟುನಾಯಕ ತಾಂಡಾ ನಿವಾಸಿ ಬಲರಾಮ್ ಜೊತೆ ಮಹಿಳೆಯ ಮದುವೆ ನಡೆದಿತ್ತು.
ಮಗು ಜನಿಸಿದ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಹಾಗೂ ಮಗುವಿಗೆ ಖತನಾ ಮಾಡಿಸುವಂತೆ ಗಂಡ ಮತ್ತು ಕುಟುಂಬದವರು ಒತ್ತಾಯಿಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಕಿರುಕುಳದಿಂದ ಬೇಸತ್ತು ಮಹಿಳೆ ತವರು ಮನೆಗೆ ಮರಳಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಗಂಡ, ಅತ್ತೆ-ಮಾವ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಿಜೆಪಿ ಶಾಸಕರಾದ ಪ್ರಭು ಚೌಹಾನ್ ಹಾಗೂ ಶೈಲೇಂದ್ರ ಬೆಲ್ದಾಳೆ ಮಹಿಳೆಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.


