ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಕಲಾದಗಿಯ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬಂಧಿಸಿ ,ರಂಭಾಪುರಿ ಶ್ರೀಗಳ ವಿರುದ್ಧ ಮಠದ ಭಕ್ತರು ಪ್ರತಿಭಟನೆ ನಡೆಸಿದ್ದು,ಕಾರನ್ನು ಅಡ್ಡಗಟ್ಟಲು ಯತ್ನಿಸಿದ ಮತ್ತು ಮಹಿಳೆಯೊಬ್ಬರು ಕಾರಿಗೆ ಚಪ್ಪಲಿ ತೂರಿದ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ನಡೆದಿದೆ.
ಕಾರ್ಯಕ್ರಮವೊಂದರ ನಿಮಿತ್ತ ಉದಗಟ್ಟಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಶ್ರೀಗಳ ಕಾರನ್ನು ಅಡಗಟ್ಟಿದ್ದ ಭಕ್ತರು,ಕಲಾದಗಿ ಮಠದ ವಿಚಾರಕ್ಕೆ ಸಂಬಂಧಿಸಿ ವಿವಾದ ಇರುವುದರಿಂದ ಅಲ್ಲಿಗೆ ಹೋಗಬಾರದು ಎಂದು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ತಳ್ಳಾಟ, ನೂಕಾಟ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಅವರ ಆಕ್ಷೇಪದ ಹೊರತಾಗಿಯೂ ಶ್ರೀಗಳು ಅಲ್ಲಿಗೆ ಹೋಗಿದ್ದನ್ನು ಪ್ರತಿಭಟಿಸಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶ ಮಾಡಿ ಮಹಿಳೆಯರನ್ನು ಚದುರಿಸಿದ್ದಾರೆ.
ಬಾಗಲಕೋಟೆಯಾ ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದು,ಮುಂದೆ ಪೀಠಾಧಿಪತಿಗಳು ಯಾರಾಗಬೇಕು ಎಂಬ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿತ್ತು. ಇಬ್ಬರು ಶ್ರೀಗಳ ನಡುವೆ ವಿವಾದದಿಂದ ಗುರುಗಳ ಆಯ್ಕೆ ಆಗಿರಲಿಲ್ಲ. ಬದಲಾಗಿ ವಿವಾದ ಕೋರ್ಟ್ ಮೆಟ್ಟಿಲು ಹತ್ತಿತ್ತು. ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್.ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು.ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿ ಅಕೋಶವ್ಯಕ್ತಪಡಿಸಿದ್ದರು.
ಈಗ ವಿವಾದ ಜಿಲ್ಲಾ ನ್ಯಾಯಾಲಯದರುವುದರಿಂದ ರಂಭಾಪುರಿ ಶ್ರೀಗಳು ಕಲಾದಗಿ ಮಠಕ್ಕೆ ಭೇಟಿ ನೀಡುವುದು ಸರಿಯಲ್ಲ ಎನ್ನುವುದು ವಾದವಾಗಿದೆ. ಶ್ರೀಗಳು ಮಠಕ್ಕೆ ಭೇಟಿ ನೀಡುವುದಲ್ಲದೆ, ವಿವಾದ ಕೋರ್ಟ್ ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ತಕರಾರು ಎದುರಾಗಿತ್ತು. ಇದೆಲ್ಲದರ ಒಟ್ಟು ಮೊತ್ತವಾಗಿ ಪ್ರತಿಭಟನೆ ಭುಗಿಲೆದ್ದಿತ್ತು.ಮಾಹಿತಿ ತಿಳಿಯುತ್ತಿದ್ದಂತೆಯೇ ಅವರನ್ನು ತಡೆಯಲು ಊರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅದರಲ್ಲಿ ಮಹಿಳೆಯರೂ ಸೇರಿದ್ದರು.ಈ ನಡುವೆ ಚಪ್ಪಲಿ ತೂರಾಟ ತಳ್ಳಾಟ ನಡೆದಿದೆ ಎಂದು ತಿಳಿದುಬಂದಿದೆ.