ಬಸವಕಲ್ಯಾಣ : ಮದುವೆಯಾದ ಕೆಲವೇ ವರ್ಷದಲ್ಲಿ ಪರ ಪುರುಷನ ಪ್ರೇಮ ಪಾಶಕ್ಕೆ ಸಿಲುಕಿದ ಗೃಹಿಣಿಯೊಬ್ಬಳು ಪತಿಗೆ ವಿಷ ಉಣಿಸಿ ಕೊಲೆ ಮಾಡಿದ್ದಾಳೆ ಎನ್ನುವ ಆರೋಪ ತಾಲೂಕಿನ ಮುಡಬಿ ಗ್ರಾಮದಿಂದ ಕೇಳಿ ಬಂದಿದೆ.
ಮುಡಬಿ ಗ್ರಾಮದ ನಿವಾಸಿ ಮಹಾದೇವ ಬಿರಾದಾರ(33) ಕೊಲೆಯಾದ ನತದೃಷ್ಠ ಪತಿಯಾಗಿದ್ದಾನೆ.
ಕಳೆದ ಮೂರು ವರ್ಷದ ಹಿಂದೆ ಕಲಬುರ್ಗಿ ಜಿಲ್ಲೆಯ ಕಣ್ಣೂರ ಗ್ರಾಮದ ನಿವಾಸಿ ಪ್ರೀಯಾಂಕಾ ಎನ್ನುವಾಕೆಯೊಂದಿಗೆ ಮುಡಬಿ ಗ್ರಾಮದ ಮಹಾದೇವ ಎನ್ನುವಾತನೊಂದಿಗೆ ವಿವಾಹವಾಗಿತ್ತು. ಈ ದಂಪತಿಗಳಿಗೆ ಒಂದು ಗಂಡು ಮಗು ಸಹ ಜನಿಸಿದೆ.ಮದುವೆ ನಂತರ ಕೆಲ ದಿನಗಳ ಕಾಲ ಚನ್ನಾಗಿಯೇ ಇದ್ದ ಪತ್ನಿ ನಂತರ ಪರ ಪುರುಷನ ಪ್ರೇಮ ಪಾಶಾಕ್ಕೆ ಬಿದ್ದಿದ್ದು, ಆತನೊಂದಿಗೆ ಮೊಬೈಲ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿ ಇದ್ದಳು.ಪತಿಗೆ ತಿಳಿಯದ ಹಾಗೆ ಕದ್ದು ಮುಚ್ಚಿ ಪ್ರೀಯಕರೊಂದಿಗೆ ಸುತ್ತಾಡುವುದು ಮಾಡುತಿದ್ದ ಈಕೆ ಕೆಲ ದಿನಗಳ ನಂತರ ಪತಿ ಮನೆಯವರೊಂದಿಗೆ ಅನಗತ್ಯವಾಗಿ ಕಿರಿಕಿರಿ ಮಾಡುತಿದ್ದಳು ಎನ್ನಲಾಗಿದೆ. ಮೊಬೈಲ್’ನಲ್ಲಿ ನಿರಂತರವಾಗಿ ಆತನೊಂದಿಗೆ ವಿಡಿಯೋ ಕಾಲ್, ವಾಟ್ಸಾಪ್ ಚಾಟಿಂಗ್ ಮಾಡುತಿದ್ದ ಈಕೆಯನ್ನು ಪತಿ ಹಾಗೂ ಆಕೆಯ ಮನೆಯವರು ಪ್ರಶ್ನಿಸಿದ್ದಾರೆ. ಈ ಕಾರಣಕ್ಕಾಗಿ ಜಗಳ ನಡೆದಿದ್ದು, ಗೃಹಿಣಿ ಪಾಲಕರ ಸಮಕ್ಷಮ ನ್ಯಾಯ ಪಂಚಾಯಿತಿ ಸಹ ನಡೆಸಲಾಗಿದೆ ಎನ್ನಲಾಗಿದೆ.
ಪರ ಪುರುಷನೊಂದಿಗಿನ ಸಂಬಂಧ ಮನೆಯವರೆಲ್ಲರಿಗೆ ಗೊತ್ತಾಗುತಿದ್ದಂತೆ ಪತಿಗೆ ವಿಚ್ಛೇದನ ನೀಡಲು ಈಕೆ ಮುಂದಾಗಿದ್ದಳು ಎಂದು ಮೃತನ ಸಹೋದರರು ಮಾಹಿತಿ ನೀಡಿದ್ದಾರೆ. ಈ ನಡುವೆ ಕಳೆದ ನವೆಂಬರ್ 8ರಂದು ಸಂಜೆ ಮಹಾದೇವನ ಆರೋಗ್ಯದಲ್ಲಿ ದಿಢೀರನೆ ಏರುಪೆರಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಈತನ ದೇಹದಲ್ಲಿ ವಿಷ ಸೇರಿರುವುದೇ ಈತನ ಆರೋಗ್ಯ ಹದಗೆಡಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಗಾಬರಿಗೊಂಡ ಈತನ ತಾಯಿ ಹಾಗೂ ಸಹೋದರರು ಪತ್ನಿ ಪ್ರೀಯಾಂಕಾಳೆ ಪತಿಗೆ ವಿಷ ಉಣಿಸಿದ್ದಾಳೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಲು ಮುಂದಾಗಿದ್ದು, ಆದರೆ ದೂರು ಸ್ವೀಕರಿಸಲು ಪಿಎಸ್ಐ ಅವರು ನಿರಾಕರಿಸಿದ್ದಾರೆ ಎಂದು ಮೃತನ ಸಹೋದರರಾದ ಚನ್ನಬಸವ ಬಿರಾದಾರ ಹಾಗೂ ರಾಮಲಿಂಗ ಬಿರಾದಾರ ದೂರಿದ್ದಾರೆ.
ಪ್ರೀಯಾಂಕ ತನ್ನ ಪ್ರೀಯಕರನೊಂದಿಗೆ ನಡೆಸಿದ ಮೊಬೈಲ್ ಸಂಪರ್ಕ, ವಿಡಿಯೋ ಕಾಲ್ ವಿವರ, ವಾಟ್ಸಾಪ್ ಚಾಟಿಂಗ್ ಹಾಗೂ ಸಂಭಾಷಣೆ ರೇಕಾರ್ಡಿಂಗ್’ಗಳು ತಮ್ಮ ಬಳಿ ಇದ್ದು, ಈಕೆಯ ಅನೈತಿಕ ಸಂಬಂಧದ ಕಾರಣಕ್ಕಾಗಿಯೇ ತಮ್ಮ ಸಹೋದರನಿಗೆ ವಿಷ ಹಾಕಿ ಸಾಯುವಂತೆ ಮಾಡಿದ್ದಾಳೆ. ಆಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತನ ಸಹೋದರಾದ ಚನ್ನಬಸವ, ರಾಮಲಿಂಗ ಸೇರಿದಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ.
ತನ್ನ ಮಗನ ಸಾವಿಗೆ ಆತನ ಪತ್ನಿಯೇ ಕಾರಣವಾಗಿದ್ದು, ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತಮಗೆ ನ್ಯಾಯ ಕಲ್ಪಿಸಬೇಕು ಎಂದು ಮೃತನ ತಾಯಿ ಮಲ್ಲಮ್ಮ ಬಿರಾದಾರ ಒತ್ತಾಯಿಸಿದ್ದಾರೆ. ಮೂಲತಹ ಮೂಡಬಿ ಗ್ರಾಮದ ನಿವಾಸಿಯಾಗಿರುವ ಮಹಾದೇವ ಬಿರಾದಾರ ಬಸವಕಲ್ಯಾಣ ನಗರದ ವಾತಡೆ ಲೇಔಟ್’ನಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತಿದ್ದ.
ಕಳೆದ ನ. 9 ರಂದು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ದಾಖಲಾಗಿದ್ದು, ನ.20ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತು ಮಹಾರಾಷ್ಟ್ರದ ಸೊಲ್ಲಾಪುರ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಕಲೆಹಾಕಿ, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಿದೆ ಎಂದು ತಿಳಿದು ಬಂದಿದೆ.


