ಬಂಟ್ವಾಳ ; ದಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಅಮೆಮಾರ್ ನಿವಾಸಿ ದಿಗಂತ ಎಂಬ ಯುವಕ ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ಪೊಲೀಸರಿಗೂ ದೂರು ನೀಡಲಾಗಿದ್ದು ಯುವಕನ ನಾಪತ್ತೆಯ ಬಗ್ಗೆ ಹಲವು ಸಂಶಯಗಳನ್ನು ವ್ಯಕ್ತಪಡಿಸಲಾಗಿದೆ.
ಅದರೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬುಧವಾರ ಸಂಜೆಯಾದ್ರೂ ಯುವಕನ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನಲೆಯಲ್ಲಿ ಗುರುವಾರ ಮುಂಜಾನೆ ಹಿಂದೂ ಸಂಘಟನೆಯಿಂದ ಬೈಠಕ್ ಕರೆಯಲಾಗಿದೆ. ಬೈಠಕ್ ಬಳಿಕ ಗ್ರಾಮದ ಜನರು ಸೇರಿ ಫರಂಗಿ ಪೇಟೆಯ ಪೊಲೀಸ್ ಔಟ್ ಪೋಸ್ಟ್ನಲ್ಲಿ ವಿಚಾರಿಸಲು ಹೋದಾಗಲೂ ಅಲ್ಲಿ ಸಿಬ್ಬಂದಿ ಇಲ್ಲದ ಕಾರಣ ಜನರು ಆಕ್ರೋಶ ಗೊಂಡಿದ್ದಾರೆ.
ಹೀಗಾಗಿ ದಿಢೀರ್ ಪ್ರತಿಭಟನೆ ನಡೆಸಿ ಪೊಲೀಸರಿಗೆ ದಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ ಹಿಂದೂ ಮುಖಂಡರು ನಾಪತ್ತೆಯಾಗಿರುವ ಯುವಕ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.
ಯುವಕನ ಮನೆ ಇರುವ ಪರಿಸರವು ಮುಸ್ಲಿಂ ಸಮೂದಾಯ ಹೆಚ್ಚಾಗಿರುವ ಪ್ರದೇಶವಾಗಿದ್ದು, ಅಲ್ಲಿ ಗಾಂಜ ವ್ಯವಹಾರ ನಡೆಸುವವರು ಸಾಕಷ್ಟು ಜನ ಇದ್ದಾರೆ. ಅವರಿಂದಲೇ ಯುವಕನಿಗೆ ಏನೋ ಆಗಿರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ತನಿಕೆ ನಡೆಸಿ ಯುವಕನ ಬಗ್ಗೆ ಮಾಹಿತಿ ನೀಡದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಜನರು ನೀಡಿದ್ದಾರೆ.


