ಪಾವಗಡ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಿಕ್ಷಕ ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಗೆ ಬರುವ ಪಾವಗಡ ತಾಲ್ಲೂಕು ಸಾಸಲುಕುಂಟೆ ಸಹ ಶಿಕ್ಷಕ ಪಿ.ನಾಗಭೂಷಣ್ ಬಂಧಿತ ಶಿಕ್ಷಕ.
ಆರೋಪಿ ಶಿಕ್ಷಕ ಪಿ.ನಾಗಭೂಷಣ್, ಈ ಹಿಂದೆ ಮಧುಗಿರಿ ತಾಲ್ಲೂಕಿನ ಕೊಡಗಾರ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸದರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು ಎನ್ನಲಾಗಿದೆ. ಸದರಿ ವಿದ್ಯಾರ್ಥಿನಿಗೆ ಐ ಲವ್ ಯೂ ಎಂದು ಹೇಳಿ ಬಳೆ ತೊಡಿಸಿ ಆಮಿಷವೊಡ್ಡಿ ಬಡವನಹಳ್ಳಿಯಲ್ಲಿ ಬೇರೆ ಕಡೆಗೆ ಕರೆದೊಯ್ದು ದೌರ್ಜನ್ಯ ನಡೆಸಿದ್ದ ಆರೋಪದ ಮೇಲೆ ಈತನನ್ನು ಅಮಾನತು ಮಾಡಲಾಗಿತ್ತು. ಆದರೆ ಈ ಕುರಿತು ಯಾವುದೇ ದೂರು ದಾಖಲಾಗದ ಹಿನ್ನೆಲೆಯಲ್ಲಿ ಪಾವಗಡ ತಾಲ್ಲೂಕಿನ ಸಾಸಲುಕುಂಟೆ ಸರ್ಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದರೂ ಶಿಕ್ಷಕನ ಮೇಲೆ ಯಾವುದೇ ಕಾನೂನು ಕ್ರಮ ಆಗದ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ನೊಂದ ಬಾಲಕಿಯ ಪೋಷಕರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. “ನಿನ್ನ ಮಗಳನ್ನು ಎಷ್ಟು ಹಣಕ್ಕೆ ಮಾರಿದ್ದೀಯಾ?’ ಎಂದು ಅವಹೇಳನ ಮಾಡುತ್ತಿದ್ದಾರೆ, ಆದ್ದರಿಂದ ಸದರಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯ ತಾಯಿ ಬಡವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ.