ಉಳ್ಳಾಲ: ಫೆ.13 ನೇತ್ರಾವತಿ ನದಿಯಲ್ಲಿ ಪಂಜರ ಕೃಷಿ ಪದ್ಧತಿ ಮೂಲಕ ಸಾಕುತ್ತಿದ್ದ ಮೀನುಗಳ ಮಾರಣಹೋಮ ನಡೆದಿರುವ ಘಟನೆ ಉಳ್ಳಾಲದ ಉಳಿಯದಲ್ಲಿ ನಡೆದಿದೆ.ಫಿಶ್ ಮೀಲ್ ಕಾರ್ಖಾನೆಗಳಿಂದ ಬಿಡುವ ವಿಷಯುಕ್ತ ತ್ಯಾಜ್ಯ ನದಿನೀರಿನಲ್ಲಿ ಮಲಿನಗೊಂಡ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿರುವ ಶಂಕೆಯನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ.
ಉಳಿಯ ನಿವಾಸಿ ಬ್ಲೇರಾ ಡಿಸೋಜ ಎಂಬವರಿಗೆ ಸೇರಿದ ಸಾಕು ಮೀನುಗಳು ಸಾವನ್ನಪ್ಪಿವೆ.3.5 ಲಕ್ಷ ರೂಪಾಯಿ ಬೆಲೆಬಾಳುವ ಮೀನುಗಳು ಸಾವನ್ನಪ್ಪಿ ನಷ್ಟ ಸಂಭವಿಸಿದೆ. ಮುದ್ರ ಯೋಜನೆಯಡಿ ಸಾಲ ಮಾಡಿ ಬ್ಲೇರಾ ಅವರು ಮೀನಿನ ಕೃಷಿ ಆರಂಭಿಸಿದ್ದರು. ಎರಡು ವರ್ಷಗಳ ಹಿಂದೆ ವೃತ್ತಿಯನ್ನು ಆರಂಭಿಸಿದ ಬ್ಲೇರಾ ಅವರಿಗೆ ಇದೀಗ ಎರಡನೇ ಬಾರಿಯ ಮೀನಿನ ಕೃಷಿ ಸಂಪೂರ್ಣ ನಷ್ಟವನ್ನು ಉಂಟು ಮಾಡಿದೆ. 2022 ರ ನವೆಂಬರ್ ತಿಂಗಳಲ್ಲಿ ಈ ಬಾರಿಯ ಪಂಜರ ಕೃಷಿಯ ಮರಿಗಳನ್ನು ಹಾಕಲಾಗಿತ್ತು. ಪ್ಯಾಂಪೆನೋ ತಳಿಯ 4,500 ಮರಿಗಳು ಬೃಹತ್ ಗಾತ್ರದಲ್ಲಿ ಬೆಳೆದಿತ್ತು. ಒಂದೂವರೆ ವರ್ಷದಿಂದ ಮೀನು ಯಾವುದೇ ತೊಂದರೆಯಿಲ್ಲದೆ ಇತ್ತು. ಫೆ.11 ರಂದು ಬೆಳಿಗ್ಗೆ ಬ್ಲೇರಾ ಅವರು ನದಿಬದಿಗೆ ತೆರಳಿದಾಗ 22 ಮೀನುಗಳು ಸಾವನ್ನಪ್ಪಿದ್ದವು. ಆನಂತರ ಇಂದು ಪಂಜರದಲ್ಲಿದ್ದಂತಹ ಎಲ್ಲಾ ಮೀನುಗಳು ಸಾವನ್ನಪ್ಪಿ ನದಿ ನೀರಿನಲ್ಲಿ ತೇಲುತ್ತಿತ್ತು. ಜೊತೆಗೆ ಪಚ್ಚಿಳೆ(ಚಿಪ್ಪಿನ ಮೀನು) ಕೂಡಾ ಬಾಯ್ತೆರೆದಿದೆ. ನದಿ ನೀರು ಮಲಿನದಿಂದ ಘಟನೆ ಸಂಭವಿಸಿರುವ ಶಂಕೆ ಇದೆ. ಕಾರ್ಖಾನೆಯಿಂದ ಹೊರಬಿಡುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರಿನಿಂದ ಘಟನೆ ಸಂಭವಿಸಿರುವ ಶಂಕೆ ಇದ್ದು, ಎಕ್ಕೂರು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾನಿಲಯದ ವಿಜ್ಞಾನಿ ಹಾಗೂ ಮೀನುಗಾರಿಕಾ ಇಲಾಖೆಯವರು ಭೇಟಿ ನೀಡಿ ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ.