ನೆಲಮಂಗಲ : ಟಿಪ್ಪರ್ ಡಿಕ್ಕಿಯಾಗಿ ಬೈಕ್ ಹಿಂಬದಿ ಕುಳಿತಿದ್ದ ಗರ್ಭಿಣಿ ಜೊತೆ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ಹೊರಗಡೆ ಬಂದು ವಿಲ ವಿಲ ಒದ್ದಾಡಿ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಸಿಂಚನ (30) ಎಂದು ಗುರುತಿಸಲಾಗಿದೆ .

ನೆಲಮಂಗಲ ತಾಲೂಕಿನ ತೋಟನಹಳ್ಳಿ ಗ್ರಾಮದ ಮಂಜುನಾಥ್ ದಂಪತಿಗಳು ಬೈಕ್ ನಲ್ಲಿ ಸಂಚರಿಸುತ್ತಿದ್ದು ಸಿಂಚನಗೆ ಬರುವ ಆಗಸ್ಟ್ 17ಕ್ಕೆ 8 ಮುಗಿದು 9 ತಿಂಗಳು ತುಂಬುತ್ತಿತ್ತು. ಹೀಗಾಗಿ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ಬೈಕ್ನಲ್ಲಿ ದಾಬಸ್ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಆಗ ಸಿಂಚನಾ ಬೈಕ್ನಿಂದ ಕೆಳೆಗೆ ಬಿದ್ದಿದ್ದಾರೆ. ಬಳಿಕ ಟಿಪ್ಪರ್ ಸಿಂಚನಾ ಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳು ಮಗು ಹೊರಗೆ ಬಂದಿದೆ. ನಡು ರಸ್ತೆಯಲ್ಲೇ ಮಗು ವಿಲ ವಿಲ ಒದ್ದಾಡಿ ಮೃತಪಟ್ಟಿದೆ. ಪತ್ನಿಯ ಸಾವು ಕಂಡು ಪತಿಯ ಗೋಳಾಟದ ದೃಶ್ಯ ಮನುಕುಲಕುವಂತಿದೆ.


