Wednesday, November 5, 2025
Flats for sale
Homeಜಿಲ್ಲೆನವದೆಹಲಿ : ಮಂಗಳೂರಿನ ಇಎಸ್‌ಐ ಆಸ್ಪತ್ರೆಯನ್ನು ಇಎಸ್‌ಐಸಿಗೆ ಹಸ್ತಾಂತರಿಸಲು ಕೇಂದ್ರ ಕಾರ್ಮಿಕ ಸಚಿವರಿಗೆ ಸಂಸದ ಕ್ಯಾ.ಚೌಟ...

ನವದೆಹಲಿ : ಮಂಗಳೂರಿನ ಇಎಸ್‌ಐ ಆಸ್ಪತ್ರೆಯನ್ನು ಇಎಸ್‌ಐಸಿಗೆ ಹಸ್ತಾಂತರಿಸಲು ಕೇಂದ್ರ ಕಾರ್ಮಿಕ ಸಚಿವರಿಗೆ ಸಂಸದ ಕ್ಯಾ.ಚೌಟ ಮನವಿ.

ನವದೆಹಲಿ : ಮಂಗಳೂರಿನ ಇಎಸ್ಐ ಆಸ್ಪತ್ರೆಯನ್ನು ಇಎಸ್‌ಐಸಿ (ESIC)ಗೆ ಹಸ್ತಾಂತರಿಸಲು ಅನೂಕೂಲ ಮಾಡಿಕೊಡುವುದಕ್ಕೆ ರಾಜ್ಯ ಸರ್ಕಾರದಿಂದ ನೂತನವಾಗಿ ರಚನೆಯಾಗಿರುವ ಕರ್ನಾಟಕ ESI ಸೊಸೈಟಿಗೆ ನಾಮ ನಿರ್ದೇಶನಗೊಂಡಿರುವ ಸದಸ್ಯರ ಆಯ್ಕೆಗೆ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಸಂಸದ ಕ್ಯಾ. ಚೌಟ ಅವರು, ರಾಜ್ಯದ ಇಎಸ್‌ಐ ಆಸ್ಪತ್ರೆಗಳ ಬಲವರ್ಧನೆಗೆ ಅನುಕೂಲವಾಗುವಂತೆ ಇಎಸ್‌ಐ ಸೊಸೈಟಿಯನ್ನು ರಚಿಸುವಂತೆ ಸಂಸದನಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆ. ನಮ್ಮ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರವು ಇದೀಗ ಕರ್ನಾಟಕ ಇಎಸ್‌ಐಯನ್ನು ರಚಿಸಿ ಅದಕ್ಕೆ ಸದಸ್ಯರನ್ನು ನಾಮನಿರ್ದೇಶನಗೊಳಿಸಿ ಅದರ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಈ ಹಿನ್ನಲೆಯಲ್ಲಿ ಇಎಸ್‌ಐ ಸೊಸೈಟಿಗೆ ಸದಸ್ಯರ ನಾಮನಿರ್ದೇಶನಗೊಳಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕರ್ನಾಟಕ ESI ಸೊಸೈಟಿ ಕಾರ್ಯಾರಂಭ ಕ್ರಮ ಕೈಗೊಳ್ಳಬೇಕು. ಇದರಿಂದ ಮಂಗಳೂರಿನ ESI ಆಸ್ಪತ್ರೆಯನ್ನು ಕೂಡ ನೌಕರರ ರಾಜ್ಯ ವಿಮಾ ನಿಗಮ (ESIC)ವು ಔಪಚಾರಿಕವಾಗಿ ಸ್ವಾಧೀನಪಡಿಸಿಕೊಳ್ಳಲು ಹೆಚ್ಚಿನ ಅನುಕೂಲವಾಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಕರ್ನಾಟಕ ಇಎಸ್‌ಐ ಸೊಸೈಟಿಗೆ ನಾಮನಿರ್ದೇಶನಗೊಂಡಿರುವ ಸದಸ್ಯರ ಆಯ್ಕೆ ಪ್ರಕ್ರಿಯೆ ಬಗ್ಗೆ ಇಎಸ್‌ಐಸಿ ಹಾಗೂ ಕಾರ್ಮಿಕ ಸಚಿವಾಲಯವು ಪರಿಶೀಲನೆ ನಡೆಸಿ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ಕ್ಯಾ. ಚೌಟ ಅವರು ಸಚಿವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

ಕ್ಯಾ. ಚೌಟ ಅವರು, 100 ಹಾಸಿಗೆಗಳ ಸಾಮರ್ಥ್ಯದ ಮಂಗಳೂರು ಇಎಸ್ಐ ಆಸ್ಪತ್ರೆಯ ಸಮಸ್ಯೆಗಳ ಕುರಿತು ಚರ್ಚಿಸಲು ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನೌಕರರ ರಾಜ್ಯ ವಿಮಾ ನಿಗಮದ(ESIC) ಮಹಾನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಭೇಟಿ ವೇಳೆ ಇಎಸ್ಐಸಿಗೆ ಸಂಬಂಧಿಸಿದ ರಾಜ್ಯದ ಎಲ್ಲಾ ಕಾರ್ಯ ಚಟುವಟಿಕೆ ಸುಗಮಗೊಳಿಸಲು ಮತ್ತು ಕೇಂದ್ರದಿಂದ ಅನುದಾನ ಬಿಡುಗಡೆಯನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯ ಸರ್ಕಾರವು ಪ್ರತ್ಯೇಕ ಇಎಸ್‌ಐ ಸೊಸೈಟಿ ರಚಿಸಬೇಕು. ಅದು ರಾಜ್ಯದಲ್ಲಿನ ಎಲ್ಲಾ ಇಎಸ್ಐಸಿಗೆ ಸಂಬಂಧಿಸಿದ ವಿಷಯಗಳಿಗೆ ಮತ್ತು ಕೇಂದ್ರದ ಫಂಡ್ ವಿತರಣೆಗೆ ಆಡಳಿತ ಮಂಡಳಿಯಾಗಿರುತ್ತದೆ ಎಂಬ ಮಹತ್ವದ ಮಾಹಿತಿ ನೀಡಿದ್ದರು. ಏಕೆಂದರೆ ಇಎಸ್‌ಐ ಆಸ್ಪತ್ರೆಗೆಗಳು ಇಎಸ್‌ಐಸಿ ನೇರ ನಿಯಂತ್ರಣಕ್ಕೆ ಬಂದರೆ ಅವುಗಳ ದಕ್ಷ ಆಡಳಿತ, ಸೂಕ್ತ ನಿರ್ವಹಣೆ ಮತ್ತು ವಿಮೆ ಮಾಡಿದ ಫಲಾನುಭವಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವುದಕ್ಕೆ ಸಾಧ್ಯವಾಗುತ್ತದೆ.

ಇದರ ಬೆನ್ನಲ್ಲೇ ರಾಜ್ಯ ಇಎಸ್ಐ ಸೊಸೈಟಿ ರಚನೆ ಸಂಬಂಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಸದ ಕ್ಯಾ. ಚೌಟ ಅವರು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಒತ್ತಾಯಿಸಿದ್ದರು. ಅದಾದ ಬಳಿಕ ಕಳೆದ ಮೇ ತಿಂಗಳಲ್ಲಿ ದೆಹಲಿಯಲ್ಲಿರುವ ಇಎಸ್ ಐಸಿ ಪ್ರಧಾನ ಕಚೇರಿಯ ಉನ್ನತ ಮಟ್ಟದ ಅಧಿಕಾರಿಗಳ ತಂಡ ಕೂಡ ಮಂಗಳೂರಿನ ಶಿವಭಾಗ್‌ ನಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಸೌಲಭ್ಯ ಮತ್ತು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿತ್ತು. ಅಲ್ಲದೆ ಈ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಹಾಗೂ ಮೂಲಸೌಕರ್ಯ ಸುಧಾರಣೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿತ್ತು.

ಈ ನಡುವೆ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಅವರು ಕೂಡ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರನ್ನು ಭೇಟಿಯಾಗಿ ಸೊಸೈಟಿ ರಚನೆಗೆ ಶೀಘ್ರ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಇದೀಗ ಸಂಸದ ಕ್ಯಾ. ಚೌಟ ಅವರ ನಿರಂತರ ಪರಿಶ್ರಮದ ಫಲವಾಗಿ ಕರ್ನಾಟಕ ESI ಸೊಸೈಟಿ ರಚನೆ ಹಾಗೂ ಅದಕ್ಕೆ ಸೂಕ್ತ ಸದಸ್ಯರನ್ನು ನಾಮನಿರ್ದೇಶನಗೊಳಿಸುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಈ ಕರ್ನಾಟಕ ಇಎಸ್‌ಐ ಸೊಸೈಟಿ ಕಾರ್ಯಾರಂಭಗೊಂಡರೆ ಮಂಗಳೂರಿನ ಇಎಸ್‌ಐ ಆಸ್ಪತ್ರೆಗಳಲ್ಲಿ ಬಡ ಹಾಗೂ ಕಾರ್ಮಿಕ ಕುಟುಂಬಗಳಿಗೆ ಮತ್ತಷ್ಟು ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳು ದೊರೆಯುವುದಕ್ಕೆ ಅನುಕೂಲವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular