ನವದೆಹಲಿ : ಭಾರತ- ಪಾಕಿಸ್ತಾನದ ನಡುವೆ ಜೂನ್ ೬ ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯದ ಮೇಲೆ ಐಸಿಸ್ ಉಗ್ರರ ಕರಿನೆರಳು ಬಿದ್ದಿದ್ದು ಆಟಗಾರರಿಗೆ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ.
ಪಂದ್ಯ ನಡೆಯುವ ಸಮಯದಲ್ಲಿ ದಾಳಿ ಮಾಡುವ ಬೆದರಿಕೆ ಹಾಕಿ ವೀಡಿಯೊವನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಪಂದ್ಯ ನಡೆಯುವ ಸ್ಥಳ ಮತ್ತು ಆಟಗಾರರು ಉಳಿದುಕೊಂಡಿರುವ ಕೊಠಡಿ ಸುತ್ತ ವ್ಯಾಪಕ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪಂದ್ಯ ನಡೆಯುವ ನಸ್ಸೌ ಕೌಂಟಿಯ ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ಅವರು ಬೆದರಿಕೆ ದೃಢಪಡಿಸಿದ್ದಾರೆ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಭಯೋತ್ಪಾದಕ ಗುಂಪು ಐಸಿಸ್, ಏಕಾಂಗಿ ತೋಳದ ಮಾದರಿಯಲ್ಲಿ ದಾಳಿ ನಡೆಸುವ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ಆಟಗಾರರು ಪ್ರತ್ಯೇಕವಾಗಿ ಹೊರಗಡೆ ಸುತ್ತಾಡದಂತೆ ಸೂಚನೆ ನೀಡಲಾಗಿದೆ.
ಐಪಿಎಲ್ ಫ್ಲೇ ಆಫ್ ಪಂದ್ಯ ಅಹಮದಾಬಾದ್ ನಲ್ಲಿ ನಡೆಯುತ್ತಿದ್ದ ವೇಳೆ ಆಟಗಾರರಿಗೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಆರ್ ಸಿಬಿಯ ಯಾವುದೇ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಿರಲಿಲ್ಲ. ಆ ಪಂದ್ಯದಲ್ಲಿ ಆರ್ ಆರ್ ವಿರುದ್ದ ಆರ್ ಸಿಬಿ ಪರಾಭವಗೊಂಡಿತ್ತು. ಇದೀಗ ಜೂನ್ 6 ರಂದು ನಡೆಯಲಿರುವ ಭಾರತ- ಪಾಕಿಸ್ತಾನ ಪಂದ್ಯ ನಡೆಯುವ ಸಮಯದಲ್ಲಿ ದಾಳಿ ನಡೆಸುವುದಾಗಿ ಐಸಿಸ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣ ಸೇರಿದಂತೆ ಎಲ್ಲೆಡೆ ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಪ್ರತಿಕ್ರಿಯೆ ನೀಡಿಆಟಗಾರರಿಗೆ ಹೆಚ್ಚಿನ ಭದ್ರತೆ ನ್ಯೂಯಾರ್ಕ್ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.”ಈ ಸಮಯದಲ್ಲಿ ಯಾವುದೇ ವಿಶ್ವಾಸಾರ್ಹ ಸಾರ್ವಜನಿಕ ಸುರಕ್ಷತೆ ಬೆದರಿಕೆ ಇಲ್ಲ,”, ಆದರೆ “ನಾವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ.ಅನುಮಾನಾಸ್ಪದವಾಗಿ ಓಡಾಟ ಮಾಡುವ ಎಲ್ಲರನ್ನು ತಪಾಸಣೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಈ ಬಾರಿಯ ಟಿ-20 ವಿಶ್ವಕಪ್ ಪಂದ್ಯಾವಳಿ ಜೂನ್ 2 ರಿಂದ ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಆರಂಭವಾಗಲಿದ್ದು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಜೂನ್ 6 ರಂದು ನ್ಯೂಯಾರ್ಕ್ನಲ್ಲಿ ಎದುರಿಸಲು ಸಜ್ಜಾಗಿದೆ.