ನವದೆಹಲಿ : ನೀಟ್ ಹಾಗೂ ಸಿಬಿಎಸ್ಇ ಪರೀಕ್ಷೆಗಳಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಕ್ರಮಗಳ ವಿರುದ್ಧ ಶನಿವಾರ ದೆಹಲಿಯ ಜಂತರ್ ಮಂತರ್ನಲ್ಲಿ ಸಿಜೆಪಿ (Cockroach Janata Party – CJP) ವತಿಯಿಂದ ಭಾರೀ ಪ್ರತಿಭಟನೆ ನಡೆಯಿತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಮೆರಿಕದಿಂದ ಆಗಮಿಸಿದ್ದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು. ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಾವಿರಾರು ವಿದ್ಯಾರ್ಥಿಗಳು, ಯುವಕರು, ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಜಿರಳೆ (Cockroach) ಮುಖವಾಡ ಧರಿಸಿ ಪ್ರತಿಭಟನೆ ನಡೆಸಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ
ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಜೆ 5 ಗಂಟೆಯೊಳಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಬೇಡಿಕೆ ಈಡೇರದಿದ್ದಲ್ಲಿ ದೇಶಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಂತರ್ ಮಂತರ್ ಹಾಗೂ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಸುಮಾರು 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವಿಮಾನ ನಿಲ್ದಾಣ ಹಾಗೂ ನಗರ ಪ್ರವೇಶ ಗಡಿಗಳಲ್ಲಿಯೂ ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತು.
“ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು” ಎಂಬ ಘೋಷಣೆಗಳಿರುವ ಬ್ಯಾನರ್ಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು. ಪ್ರತಿಭಟನೆ ವೇಳೆ ಡ್ರೋನ್ಗಳ ಮೂಲಕ ನಿಗಾವಹಿಸಲಾಗಿತ್ತು.
6 ಮಂದಿ ವಶಕ್ಕೆ
ಪ್ರತಿಭಟನೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕೆಲ ಸಮಯ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


