ನವದೆಹಲಿ : ಹೊರ್ಮುಜ್ ಜಲಸಂಧಿ ಸೇರಿದಂತೆ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಭಾರತೀಯ ಹಡಗುಗಳ ಸಂಚಾರಕ್ಕೆ ಇದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಭಾರತೀಯ ಹಡಗುಗಳಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನೌಕಾಯಾನ ಮಹಾನಿರ್ದೇಶನಾಲಯ (ಡಿಜಿಎಸ್) ತಿಳಿಸಿದೆ.
ಈ ಕುರಿತು ಡಿಜಿಎಸ್ ಸುತ್ತೋಲೆ ಹೊರಡಿಸಿದ್ದು, ಭಾರತೀಯ ಹಡಗುಗಳು ಸಂಚಾರ ನಡೆಸುವ ವೇಳೆ ಅಗತ್ಯ ಭದ್ರತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಹಡಗುಗಳ ಮಾಲೀಕರು, ವ್ಯವಸ್ಥಾಪಕರು, ಆರ್ಪಿಎಸ್ಎಲ್ ಏಜೆನ್ಸಿಗಳು, ಕಂಪನಿಗಳು, ನಾವಿಕರು ಹಾಗೂ ಮಾಸ್ಟರ್ಗಳು ಕರಾವಳಿ ರಾಷ್ಟ್ರಗಳ ಸರ್ಕಾರಗಳು ಮತ್ತು ಭದ್ರತಾ ಸಂಸ್ಥೆಗಳ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ತಿಳಿಸಲಾಗಿದೆ.
ಭಾರತೀಯ ನಾವಿಕರು ಹಾಗೂ ಸರಕು ಸಾಗಣೆ ಹಡಗುಗಳ ಸುರಕ್ಷತೆಗೆ ಆದ್ಯತೆ ನೀಡಿರುವ ಡಿಜಿಎಸ್, ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯ, ವಿದೇಶಾಂಗ ಸಚಿವಾಲಯ, ಭಾರತೀಯ ನೌಕಾಪಡೆ ಹಾಗೂ ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸುತ್ತಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಹೊಸ ಆದೇಶದಿಂದ ಪರ್ಷಿಯನ್ ಕೊಲ್ಲಿ ಮಾರ್ಗದಲ್ಲಿ ಸಂಚರಿಸುವ ಭಾರತೀಯ ವಾಣಿಜ್ಯ ಹಡಗುಗಳಿಗೆ ಅನುಕೂಲವಾಗಲಿದ್ದು, ಜಾಗರೂಕತೆಯೊಂದಿಗೆ ಸಂಚಾರ ಮುಂದುವರಿಸುವಂತೆ ಡಿಜಿಎಸ್ ಸೂಚಿಸಿದೆ.


