ನವದೆಹಲಿ : ಐಸಿಸ್ ಉಗ್ರಗಾಮಿ ಸಂಘಟನೆಯು ಖಲಿಫತ್ ಘೋಷಣೆ ಮಾಡಿದ ೧೦ನೇ ವರ್ಷಾಚರಣೆಯ ಅಂಗವಾಗಿ ಜಗತ್ತಿನಾದ್ಯಂತ ನಾಸ್ತಿಕರನ್ನು ಹತ್ಯೆ ಮಾಡುವಂತೆ ಒಂಟಿ ತೋಳಗಳಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಗಳು ಈಗ ದೇಶದಲ್ಲಿರುವ ಇಸ್ಲಾಮಿಕ್ ಗುಂಪುಗಳ ಮೇಲೆ ತೀವ್ರ ನಿಗಾವಿರಿಸಿವೆ.
ಇಸ್ಲಾಮಿಕ್ ಸ್ಟೇಟ್ ವಕ್ತಾರ ಅಬು ಹುಧಾಯಫಹ್ ಅಲ್ ಅನ್ಸಾರಿ ಹೇಳಿಕೆ ಬಿಡುಗಡೆಗೊಳಿಸಿ ತನ್ನ ಗುಂಪು ಸೇರುವಂತೆ ಎಲ್ಲಾ ದೇಶಗಳ ವಿದೇಶಿ ಹೋರಾಟಗಾರರಿಗೆ ಕರೆ ನೀಡಿದ್ದಾನೆ. ಮಾಸ್ಕೋದಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯನ್ನು ಅನ್ಸಾರಿ ಶ್ಲಾಘಿಸಿದ್ದಾನೆ. ಪ್ರವಾದಿ ಹೇಳಿದಂತೆ ಜಗತ್ತಿನಲ್ಲಿ ಇಸ್ಲಾಮ್ ಕ್ರಮೇಣವಾಗಿ ಮೇಲುಗೈ ಪಡೆಯಲಿದೆ ಎಂದಿದ್ದಾನೆ. ಅಲ್ಹಾಹ ಎನ್ನುವ ೪೧ ನಿಮಿಷಗಳ ಆಡಿಯೋದಲ್ಲಿ ಅಲ್ ಖೈದಾ ತಾನು ಸಾಗಿದ ಮಾರ್ಗ ತೊರೆದಿರುವುದನ್ನೂ ಆತ ಖಂಡಿಸಿದ್ದಾನೆ.
ಕಳೆದ ಆಗಸ್ಟ್ನಲ್ಲಿ ಐಸಿಸ್ ವಕ್ತಾರನ ಹುದ್ದೆಗೇರುವವರೆಗೂ ಈ ಅನ್ಸಾರಿ ಯಾರೆಂದು ಜಗತ್ತಿನಲ್ಲಿ ಯಾರಿಗೂ ಗೊತ್ತಿರಲಿಲ್ಲ. ಯಹೂದಿಗಳೊಂದಿಗಿನ ಯುದ್ಧವು ಒಂದು ಅಥವಾ ಎರಡು ದೇಶಗಳಿಗೆ ಪರಿಹಾರ ಸಿಗುವುದರೊಂದಿಗೆ ಅಂತ್ಯ ಗೊಳ್ಳುವುದಿಲ್ಲ. ಇದೊಂದು ಧಾರ್ಮಿಕ ಸೈದ್ಧಾಂತಿಕ ಯುದ್ಧವಾಗಿದ್ದು ಕ್ರೈಸ್ತರನ್ನು ಸಂಪೂರ್ಣವಾಗಿ ಕೊಲ್ಲುವವರೆಗೂ ಇದು ಮುಂದುವರಿಯುತ್ತದೆ ಎಂಬುದು ಆತನ ವಾದ.
ನಾಸ್ತಿಕರನ್ನು ಬಾಂಬ್ಗಳೊಂದಿಗೆ ಸ್ಫೋಟಿಸಬಹುದು, ಗುಂಡುಗಳಿಂದ ಹೊಡೆದುರುಳಿಸಬಹುದು.ಅವರ ಮೇಲೆ ಬಸ್ಸುಗಳನ್ನು ಹರಿಸಬಹುದು, ಚಾಕುವಿನಿಂದ ಅವರ ಕುತ್ತಿಗೆ ಕೊಯ್ಯಬಹುದು ಎಂದೂ ಸಲಹೆ ನೀಡಿದ್ದಾನೆ. ಈತನ ಭಾಷಣ ನಿರ್ದಿಷ್ಟವಾಗಿ ಕ್ರೈಸ್ತರು ಹಾಗೂ ಯಹ್ಯೂದರನ್ನು ಗುರಿಯಾಗಿರಿಸಿ ಹೇಳಿರುವುದರಿಂದ ದೆಹಲಿ ಮತ್ತು ಮುಂಬೈಯಲ್ಲಿರುವ ಯಹ್ಯೂದರು ಮತ್ತು ಅವರ ಸಾಮುದಾಯಿಕ ಕೇಂದ್ರಗಳ ಮೇಲೆ ತೀವ್ರ ನಿಗಾವಿಡುವಂತೆ ಸ್ಥಳೀಯ ಕಾನೂನು ಸಂಸ್ಥೆಗಳಿಗೆ ಸೂಚಿಸಲಾಗಿದೆ.