ನವದೆಹಲಿ : ಛತ್ತೀಸ್ ಗಢದ ನೂತನ ಮುಖ್ಯಮಂತ್ರಿಯಾಗಿ ಮಾಜಿ ಕೇಂದ್ರ ಸಚಿವ ವಿಷ್ಣುದೇವ್ ಸಾಯಿ ಆಯ್ಕೆಯಾಗಿದ್ದಾರೆ.
ಬಿಜೆಪಿ ವೀಕ್ಷಕರಾದ ಸರ್ಬಾನಂದ ಸೋನೋವಾಲ್, ಅರ್ಜುನ್ ಮುಂಡಾ ಮತ್ತು ದುಷ್ಯಂತ್ ಗೌತಮ್ ಸಮ್ಮುಖದಲ್ಲಿ ಭಾನುವಾರ ನಡೆದ ಶಾಸಕರ ಸಭೆಯಲ್ಲಿ ಸಿಎಂ ಹುದ್ದೆಗೆ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಸೂಚಿಸಿದರು.
ಸಭೆ ಅದಕ್ಕೆ ಅನುಮೋದಿಸಿತು. ರಮಣ್ ಸಿಂಗ್ ಅವರನ್ನು ವಿಧಾನಸಭಾಧ್ಯಕ್ಷರಾಗಿ ಹಾಗೂ ಅರುಣ ಸಾವ್ ಮತ್ತು ವಿಜಯ್ ಶರ್ಮಾ ಉಪಮುಖ್ಯಮಂತ್ರಿಗಳನ್ನಾಗಿ ಆರಿಸಲಾಗಿದೆ. ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಎಂಟನೇ ದಿನ ಎಲ್ಲ ಕುತೂಹಲಗಳಿಗೂ ತೆರೆ ಬಿದ್ದಿದೆ. ಕಡಾ ೩೨ಶೇರಷ್ಟು ಬುಡಕಟ್ಟು ಸಮುದಾಯದವರನ್ನು ಹೊಂದಿರುವ ರಾಜ್ಯದಲ್ಲಿ, ಆ ಸಮುದಾಯಕ್ಕೆ ಬಿಜೆಪಿ ಮಣೆ ಹಾಕಿದೆ.
ಬುಧವಾರ ನೂತನ ಮುಖ್ಯಮಂತ್ರಿಯ ಅಧಿಕಾರಗ್ರಹಣ ಸಮಾರಂಭ ನಡೆಯಲಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಆದಿವಾಸಿ ನಾಯಕನ ಕೈಗೆ ಅಧಿಕಾರದ ಚುಕ್ಕಾಣಿ ನೀಡಲಾಗಿದೆ.
ಬುಡಕಟ್ಟು ಸಮುದಾಯದ ವ್ಯಕ್ತಿಗೇ ಈ ಹುದ್ದೆ ಹೋಗುವುದೆಂದು ಬಹುತೇಕ ಅಂದಾಜಿಸಿದ್ದರೂ, ಮಹಿಳೆಗೆ ಸಿಗುವ ಸಾಧ್ಯತೆ ಇದೆ ಎಂದು ಅAದಾಜಿಸಲಾಗಿತ್ತು. ಆದರೆ ಕಡೆಯಲ್ಲಿ ಹೈಕಮಾಂಡ್ ಮನಸ್ಸನ್ನು ಗೆದ್ದಿರುವ ವಿಷ್ಣುದೇವ ಛತ್ತೀಸ್ ಗಢದ ಸಿಂಹಾಸನವೇರಿದ್ದಾರೆ.
ಛತ್ತೀಸ್ ಗಢದ ರಾಯ್ಘರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ವಿಷ್ಣುದೇವ್ ಸಾಯಿ, ಪ್ರಧಾನಿ ಮೋದಿ ಅವರ ಮೊದಲ ಅವಧಿಯಲ್ಲಿ ಉಕ್ಕು ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಾಯಿ ಅವರು ೨೦೨೦ರಿಂದ ಆಗಸ್ಟ್ ೨೦೨೨ರವರೆಗೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
ನಾಲ್ಕು ಬಾರಿ ಅವರು ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿದ್ದ ಕಾರಣ, ಹಾಲಿ ಸಂಸದರಿಗೆ ಟಿಕೆಟ್ ನೀಡಬಾರದು ಎನ್ನುವ ಸೂತ್ರವನ್ನು ಬಿಜೆಪಿ ಅನುಸರಿಸಿತ್ತು. ಹೀಗಾಗಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ.


