ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಗಳಾದ ವೀಣಾ ಮತ್ತು ಅವರ ಮಾಹಿತಿ ತಂತ್ರಜ್ಞಾನ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯ ಕಪ್ಪು ಹಣ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಖನಿಜ ಕಂಪನಿಯೊಂದು ವೀಣಾ ವಿಜಯನ್ಗೆ ಹಣ ಪಾವತಿಸಿದ ಪ್ರಕರಣ ಇದಾಗಿದೆ.
ಕೇಂದ್ರ ಸರ್ಕಾರ ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ಗಂಭೀರ ವಂಚನೆ ತನಿಖಾ ಕಚೇರಿಗೆ ಸೂಚಿಸಿತ್ತು. ಅದರಂತೆ ಈ ಕಚೇರಿಯು ದೂರು ದಾಖಲಿಸಿ ತನಿಖೆ ನಡೆಸಿತ್ತು. ಈ ತನಿಖೆಯ ವಿರುದ್ಧ ಎಕ್ಸಾಲಾಜಿಕ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಇಂಥ ನಿಯೋಜನೆಗಾಗಿ ಕೇಂದ್ರ ಸರ್ಕಾರದ ಕೈಗಳಿಗೆ ಸಂಕೋಲೆ ಹಾಕಲು ಸಾಧ್ಯವಿಲ್ಲ ಎಂದಿದ್ದ ಹೈಕೋರ್ಟ್, ಕಳೆದ ತಿಂಗಳು ಪ್ರಕರಣವನ್ನು ವಜಾ ಮಾಡಿತ್ತು. ಇದೀಗ ಗಂಭೀರ ವಂಚನಾ ತನಿಖಾ ಕಚೇರಿಯ ದೂರಿನ ಆಧಾರದಲ್ಲಿ ಇ.ಡಿ.ತನಿಖೆ ಮುಂದುವರಿಸಿ ಪ್ರಕರಣ ದಾಖಲಿಸಿಕೊಂಡಿದೆ.
ಪ್ರಕರಣವೇನು?: ಕೊಚ್ಚಿಯ ಖಾಸಗಿ ಕಂಪನಿಯಾದ ಕೊಚ್ಚಿನ್ ಮಿನರಲ್ ಎಂಡ್ ರುಟೈಲ್ ಲಿಮಿಟೆಡ್(ಸಿಎಂಆರ್ಎಲ್) ಕಂಪನಿಯು ವೀಣಾ ವಿಜಯನ್ಗೆ ಸೇರಿದ ಎಕ್ಸಾಲಾಜಿಕ್ ಸೊಲ್ಯುಷನ್ ಕಂಪನಿಗೆ ೧.೭೨ ಕೋಟಿ ರೂ.ಪಾವತಿಸಿದೆ. ವೀಣಾರವರ ಕಂಪನಿ ಯಾವುದೇ ಸೇವೆ ಒದಗಿಸದಿದ್ದರೂ ೨೦೧೭ ಮತ್ತು ೨೦೧೮ರ ನಡುವೆ ಈ ಹಣ ಪಾವತಿಯಾಗಿದೆ. ಸಿಎಂಆರ್ಎಲ್ ಕಂಪನಿಯ ಪ್ರಮುಖ ವ್ಯಕ್ತಿಯೊಂದಿಗೆ ವೀಣಾ ಸಂಪರ್ಕ ಹೊಂದಿರುವುದರಿAದ ಈ ಹಣ ಸಂದಾಯವಾಗಿದೆ.
ಸಿಎಂ ವಿಜಯನ್ಹೇ ಳಿದ್ದೇನು?
ತಮ್ಮ ಪತ್ನಿಯ ನಿವೃತ್ತಿ ಹಣ ಬಳಸಿ ಮಗಳು ವೀಣಾ ಕಂಪನಿ ಆರಂಭಿಸಿದ್ದಾರೆ. ಆದರೆ ತಮ್ಮ ಕುಟುಂಬದ ಬಗ್ಗೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಕೇರಳ ವಿಧಾನಸಭೆಯಲ್ಲಿ ಹೇಳಿದ್ದರು.


