ನವದೆಹಲಿ : ಸಂಸತ್ತಿನಲ್ಲಿ ಆಯೋಜಿಸಿದ್ದ ಸಂವಿಧಾನ ಚರ್ಚೆಗೆ ಶನಿವಾರ ಲೋಕಸಭೆಯಲ್ಲಿ ಉತ್ತರ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಭಾರೀ ವಾಗ್ದಾಳಿ ನಡೆಸಿದರು. 55 ವರ್ಷ ಒಂದೇ ಕುಟುಂಬ ಭಾರತದಲ್ಲಿ ಆಡಳಿತ ನಡೆಸಿದೆ. ಪ್ರತಿ ಹಂತದಲ್ಲಿ ಈ ಕುಟುಂಬ ಸಂವಿಧಾನ ಮುಗಿಸಲು ಯತ್ನಿಸಿದೆ. ಸಂವಿಧಾನವನ್ನು ಬದಲಾಯಿಸುವುದು ಕಾಂಗ್ರೆಸ್ಗೆ ನಂತರ ಅಭ್ಯಾಸವಾಯಿತು. ಕಾಂಗ್ರೆಸ್ ಹಂತ ಹಂತವಾಗಿ ಸಂವಿಧಾನವನ್ನು ಬೇಟೆಯಾಡುತ್ತಾ ಬಂದಿದೆ. ಕಾಂಗ್ರೆಸ್ 75 ಬಾರಿ ಸಂವಿಧಾನ ಬದಲಾವಣೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಅನೇಕ ವರ್ಷಗಳ ಕಾಲ ಒಂದು ಕುಟುಂಬ ದೇಶದ ಸಂವಿಧಾನದ ಮೇಲೆ ದಾಳಿ ಮಾಡಿದೆ. ನಿಮ್ಮ ದಾರಿಗೆ ಸಂವಿಧಾನ ಅಡ್ಡಿ ಬರುವುದಾದರೆ ಅದನ್ನು ಬದಲಾಯಿಸಬಹುದು ಎಂದು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹೇಳಿದ್ದರು. ಹಿಂದಿನಿAದಲೂ ಕಾಂಗ್ರೆಸ್ ಸಂವಿಧಾನದ ಮೇಲೆ ದಾಳಿ ಮಾಡುತ್ತಲೇ ಬಂದಿದೆ ಎಂದು ಮೋದಿ ಹೇಳಿದರು.
ಇಂದಿರಾ ಗಾಂಧಿ ಕೂಡ ನೆಹರೂ ಹಾದಿಯನ್ನೇ ಅನುಸರಿಸಿದರು. ಸಂವಿಧಾನದ ದುರುಪಯೋಗ ಪಡಿಸಿಕೊಂಡು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ನ್ಯಾಯಾಲಯಗಳ ರೆಕ್ಕೆಗಳನ್ನು ಕತ್ತರಿಸಿದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಬಾಣಗಳನ್ನು ಬಿಟ್ಟರು.
ವಿಶ್ವದ ಅತಿದೊಡ್ಡ, ಕಠಿಣ ಸಂವಿಧಾನ ನಮ್ಮ ದೇಶದ ಸಂವಿಧಾನ ಜಾರಿಯಾಗಿ 75 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸಂವಿಧಾನ ಕುರಿತು ವಿಶೇಷ ಚರ್ಚೆ ನಡೆಯಿತು. ಈ ವೇಳೆ ನೆಹರು ಅವರಿಂದ ಆರಂಭಿಸಿ ರಾಹುಲ್ ಗಾಂಧಿಯವರೆಗೆ ಗಾಂಧಿ ಕುಟುಂಬ ಹೇಗೆ ಸಂವಿಧಾನವನ್ನು ದುರ್ಬಳಕೆ ಮಾಡಿದೆ ಎಂಬುದನ್ನು 1 ಗಂಟೆ 47 ನಿಮಿಷಗಳ ಭಾಷಣದಲ್ಲಿ ವಿವರಿಸಿ ಮೋದಿ ಆಕ್ರೋಶ ಹೊರ ಹಾಕಿದರು.
ರಾಜೀವ್ ಗಾಂಧಿ ಪ್ರಧಾನಮಂತ್ರಿಯಾದ ಬಳಿಕ ಸಂವಿಧಾನಕ್ಕೆ ಮತ್ತೊಂದು ಹಾನಿ ಮಾಡಿದರು. ಎಲ್ಲರಿಗೂ ಸಮಾನತೆ, ಎಲ್ಲರಿಗೂ ನ್ಯಾಯಕ್ಕೆ ಧಕ್ಕೆ ಮಾಡಿದರು. ಶಹಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕೋರ್ಟ್ ಆದೇಶವನ್ನು ಮೆಟ್ಟಿನಿಂತರು. ಕೋರ್ಟ್ ಆದೇಶ ಬದಲಿಸಲು ಸಂವಿಧಾನ ತಿದ್ದುಪಡಿ ಮಾಡಿದರು. ವೋಟು ಬ್ಯಾಂಕ್ಗಾಗಿ, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಮಹಿಳೆಯ ಹಕ್ಕು ಕಸಿಯಲಾಯಿತು.
ಗರೀಬಿ ಹಠಾವೋ ಎಂಬ ಅತಿ ದೊಡ್ಡ ಸುಳ್ಳನ್ನು ಅನೇಕ ವರ್ಷಗಳ ಕಾಲ ಒಂದು ಕಟುಂಬ ದೇಶದಲ್ಲಿ ಜೀವಂತವಾಗಿರಿಸಿತು. ಆದರೆ ಬಡವರ ಘನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ನಮ್ಮ ಸರ್ಕಾರ ಅವರಿಗಾಗಿ ಶೌಚಾಲಯಗಳನ್ನು ನಿರ್ಮಿಸಿತು ಎಂದು ಹೇಳಿದರು.
ಕಾಂಗ್ರೆಸ್ಗೆ ಸಂವಿಧಾನ ಪವಿತ್ರ ಗ್ರಂಥ ಅಲ್ಲ, ಆಟದ ವಸ್ತುವಾಗಿದೆ. ಜನರನ್ನು ಹೆದರಿಸಲು ಸಂವಿಧಾನವನ್ನು ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದೆ. ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಸಂವಿಧಾನವನ್ನೇ ಪಾಲಿಸುವುದಿಲ್ಲ. ಕುಟುಂಬ ರಾಜಕೀಯ, ಅಧಿಕಾರ ದಾಹದಿಂದ ಕೂಡಿದೆ. ಸರ್ದಾರ್ ಪಟೇಲ್ ಪ್ರಧಾನಿಯಾಗಬೇಕಿತ್ತು. ಆದರೆ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಬಿಡಲಿಲ್ಲ. ತಮ್ಮ ಪಕ್ಷದ ಸಂವಿಧಾನ ಪಾಲನೆ ಮಾಡದವರು ದೇಶದ ಸಂವಿಧಾನ ಹೇಗೆ ಸ್ವೀಕಾರ ಮಾಡುತ್ತಾರೆ?
ಕಾಂಗ್ರೆಸ್ನಲ್ಲಿ ಸೀತರಾಮ್ ಕೇಸರಿ ಎನ್ನುವ ಅತಿ ಹಿಂದುಳಿದ ಸಮುದಾಯದ ಅಧ್ಯಕ್ಷರಿದ್ದರು. ಅವರನ್ನು ಶೌಚಾಲಯದಲ್ಲಿ ಕೂಡಿ ಹಾಕಿ ಅವಮಾನ ಮಾಡಲಾಯಿತು. ಕಾಂಗ್ರೆಸ್ ಪಕ್ಷವನ್ನ ಒಂದು ಕುಟುಂಬ ಕಬ್ಜಾ ಮಾಡಿಕೊಂಡಿತು. ಸಮಾನ ನಾಗರಿಕ ಸಂಹಿತ ಸಂವಿಧಾನ ರಚನಾ ಸಮಿತಿಯ ಗಮನದಲ್ಲಿತ್ತು. ಚರ್ಚೆ ಬಳಿಕ ಆಯ್ಕೆಯಾಗಿ ಬಂದ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡಲಿ ಎಂದು ಬಿಡಲಾಯಿತು. ಧಾರ್ಮಿಕ ಅಧಾರದ ಮೇಲೆ ನೀಡಲಾಗುವ ವೈಯಕ್ತಿಕ ಕಾನೂನು ಅಂತ್ಯಗೊಳಿಸಲು ಅಂಬೇಡ್ಕರ್ ನಿರ್ಧರಿಸಿದ್ದರು. ಸುಪ್ರೀಂಕೋರ್ಟ್ ಕೂಡಾ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಯಾಗಬೇಕು ಎಂದು ಹೇಳಿದೆ. ಎಲ್ಲಾ ಭಾವನೆ ಗಮನದಲ್ಲಿಟ್ಟುಕೊಂಡು ಅದನ್ನು ಜಾರಿ ಮಾಡುವ ದಾರಿಯಲ್ಲಿದ್ದೇವೆ. ಕಾಂಗ್ರೆಸ್ ಇದನ್ನು ವಿರೋಧ ಮಾಡುತ್ತಿದೆ. ಯಾಕೆಂದರೆ ಇದು ಅವರ ರಾಜಕೀಯಕ್ಕೆ ಹೊಂದಿಕೆ ಆಗುವುದಿಲ್ಲ ಎಂದು ಹೇಳಿದರು.