ನವದೆಹಲಿ : ಇಂಡಿಗೋ ಬಿಕ್ಕಟ್ಟು ಉಂಟಾಗುವವರೆಗೆ ಕೇಂದ್ರ ಸರ್ಕಾರ ಏನು ಮಾಡುತ್ತಿತ್ತು? ಬಿಕ್ಕಟ್ಟಿನ ಬಳಿಕ ಬೇರೆ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರವನ್ನು 40000 ರೂ.ವರೆಗೆ ಏರಿಸಿದ್ದು ಹೇಗೆ? ಇದನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದ್ದೇಕೆ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದೆ. ಪಿಐಎಲ್ ವಿಚಾರಣೆ ನಡೆಸಿದ ಕೋರ್ಟ್, ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದೆ
ಇಂಡಿಗೋ ಸಿಇಒಗೆ ಕೊನೆಗೂ ನೋಟಿಸ್ : ಇಂಡಿಗೋ ಬಿಕ್ಕಟ್ಟಿನ ಸಮಗ್ರ ಮಾಹಿತಿ ಮತ್ತು ವರದಿಯನ್ನು ಗುರುವಾರ ನೀಡುವಂತೆ ಅದರ ಸಿಇಒಗೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ನೋಟಿಸ್ ನೀಡಿದೆ. ಮಧ್ಯಾಹ್ನ 3 ಗಂಟೆಗೆ ಅಧಿಕಾರಿಗಳೊಂದಿಗೆ ಹಾಜರಾಗುವAತೆ ಸಿಇಒಗೆ ಸೂಚಿಸಿದೆ.
ಏನೋ ಸಮಸ್ಯೆಯಾಗಿದೆ ಎಂದಾಗ ಅದರ ಲಾಭವನ್ನು ಬೇರೆ ವಿಮಾನಯಾನ ಸಂಸ್ಥೆಗಳು ತೆಗೆದುಕೊಳ್ಳುವುದಕ್ಕೆ ಅನುಮತಿಸುವುದು ಎಷ್ಟು ಸರಿ? 5೦೦೦ ರೂ.ಗಳಷ್ಟು ದರದ ಟಿಕೆಟ್‌ಗಳಿಗೆ 40000 ರೂ.ನಷ್ಟು ದರವನ್ನು ವಿಧಿಸಿದ್ದಾರೆ. ಹೀಗೆ ಮಾಡಲು ಇತರ ವಿಮಾನಯಾನ ಸಂಸ್ಥೆಗಳಿಗೆ ಹೇಗೆ ಅನುಮತಿ ನೀಡಲಾಯಿತು? ತಮ್ಮಷ್ಟಕ್ಕೆ ತಾವೇ ಆ ಸಂಸ್ಥೆಗಳು ಇಷ್ಟು ಹಣವನ್ನು ಪ್ರಯಾಣಿಕರಿಂದ ತೆಗೆದುಕೊಳ್ಳಲು ಹೇಗೆ ಪ್ರಾರಂಭಿಸಬಹುದು? ಇದು ಹೇಗೆ ಸಂಭವಿಸಿತು ಎಂದು ದೆಹಲಿ ಹೈಕೋರ್ಟ್ ಪೀಠ ಪ್ರಶ್ನಿಸಿತು.
ಕೇಂದ್ರದಿAದ ತೆಗೆದುಕೊAಡ ಎಲ್ಲ ಕ್ರಮಗಳನ್ನೂ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಈ ಎಲ್ಲಾ ಕ್ರಮಗಳು ಅವ್ಯವಸ್ಥೆ ಉಂಟಾದ ಮೇಲೆ ತೆಗೆದುಕೊಂಡಿದ್ದು. ಆದರೆ ಈ ಅವ್ಯವಸ್ಥೆ ಉಂಟಾಗಿದ್ದು ಹೇಗೆ ಮತ್ತು ಈ ಬಗ್ಗೆ ಇಲ್ಲಿಯವರೆಗೂ ಕೇಂದ್ರ ಏನು ಮಾಡುತ್ತಿತ್ತು ಎನ್ನುವುದು ನಮ್ಮ ಪ್ರಶ್ನೆ ಎಂದು ಹೇಳಿತು.


